ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಸ್ತಾವ ಮಾಡಿದರೂ ಅನುದಾನ ಘೋಷಿಸಿಲ್ಲ’

ರಾಜ್ಯ ಬಜೆಟ್‌ ಬಗ್ಗೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ, ಸಮಾಧಾನಕರ ಬಜೆಟ್‌ ಎಂದ ಸಾಮಾನ್ಯ ವರ್ಗದ ಜನ
Published 17 ಫೆಬ್ರುವರಿ 2024, 8:30 IST
Last Updated 17 ಫೆಬ್ರುವರಿ 2024, 8:30 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ನಗರದಲ್ಲಿ ₹450 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ, ಖಾನಾಪುರದಲ್ಲಿ ₹280 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ; ಈ ಎರಡನ್ನು ಬಿಟ್ಟರೆ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಧಾರ್ಮಿಕ ಸ್ಥಳ ಹಾಗೂ ಪ್ರವಾಸೋದ್ಯಮ ವೃದ್ಧಿ ನೀರಾವರಿಗೆ ಆದ್ಯತೆ ನೀಡುವುದಾಗಿ ತಿಳಿಸಲಾಗಿದೆ. ಆದರೆ, ಅನುದಾನ ಎಷ್ಟೆಂದು ಹೇಳಿಲ್ಲ.

ಬೆಳಗಾವಿ ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿವಾರಿಸಲು ಮೇಲ್ಸೇತುವೆ ನಿರ್ಮಿಸುವುದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಕನಸು. ಬಜೆಟ್‌ನಲ್ಲಿ ₹450 ಕೋಟಿ ಅನುದಾನ ಮೀಸಲಿಡುವ ಮೂಲಕ ಅವರು ನನಸು ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ (ಅಂದಾಜು 4.50 ಕಿ.ಮೀ) ಮೇಲ್ಸೇತುವೆ ನಿರ್ಮಾಣವಾಗಲಿದೆ.

ಜಿಲ್ಲೆಯಲ್ಲಿ ಖಾನಾಪುರ ತಾಲ್ಲೂಕು ಬಹುಪಾಲು ಕಾಡಿನಿಂದ ಕೂಡಿದೆ. ಪ್ರತಿ ವರ್ಷ ಅತಿವೃಷ್ಟಿ, ಪ್ರವಾಹದಿಂದ ಜನ ತತ್ತರಿಸುತ್ತಾರೆ. ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದನ್ನು ಗಮನಿಸಿದ ಸರ್ಕಾರ ₹280 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಜನತೆಗೆ ದೊಡ್ಡ ಕೊಡುಗೆಯೇ ಸರಿ.

ಪ್ರಮುಖ ಏತನೀರಾವರಿಗಳಾದ ಅಥಣಿ– ಕೊಟ್ಟಲಗಿ– ಅಮ್ಮಾಜೇಶ್ವರಿ, ಶ್ರೀ ಚನ್ನವೃಷಭೇಂದ್ರ, ಮಹಾಲಕ್ಷ್ಮಿ, ಸತ್ತಿಗೇರಿ, ಮಾರ್ಕಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಹಳೆಯ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಕೆರೆ ತುಂಬಿಸುವ ಯೋಜನೆಗಳಾದ ಅರಬಾವಿ, ಹಿರೆಬಾಗೇವಾಡಿ, ಸಂತಿ ಬಸ್ತವಾಡ, ಕಾಗವಾಡಗಳಲ್ಲಿ ಅನುಷ್ಠಾನ ನೆಕ್ಕಿ ಮಾಡಲಾಗಿದೆ.

ಅಧಿವೇಶನಕ್ಕೆ ಸಾಂಸ್ಕೃತಿಕ ಸ್ಪರ್ಶ: ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಬಂದಿದೆ. ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಇದು. ಇದರ ಸ್ಮರಣಾರ್ಥ ಬೆಳಗಾವಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದ್ದು ಜನರಲ್ಲಿ ಸಂಭ್ರಮ ಮೂಡಿಸುವಂಥದ್ದು.

ಕಿತ್ತೂರು ಕರ್ನಾಟಕ ಭಾಗದಲ್ಲೂ ನೂತನ ಜವಳಿ ಪಾರ್ಕ್‌, ಬೆಳಗಾವಿ ನಗರದ ಸಮೀಪ ಇಂಟಿಗ್ರೇಟೆಡ್ ಟೌನ್‌ಶಿಪ್‌, ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ (ಐಪಿಎಚ್‌ಎಲ್‌), ಎಲ್ಲ ವಾಹನಗಳ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಬೆಳಗಾವಿಯಲ್ಲೂ ಪ್ರಾಯೋಗಿಕ ಕಚೇರಿ ಆರಂಭ, ಬೆಳಗಾವಿ ಮಹಾನಗರದಲ್ಲಿ ವ್ಯಾಪಾರ ವಹಿವಾಟಿಗೆ ಮಧ್ಯರಾತ್ರಿ 1ರವರೆಗೆ ಅವಕಾಶ... ಇವು ಈ ಬಾರಿ ಜಿಲ್ಲೆಗೆ ದೊರೆತ ಪ್ರಮುಖ ಸೌಕರ್ಯಗಳು.

ಮಲ್ಲಿಕಾರ್ಜುನ ಚೌಕಾಶಿ
ಮಲ್ಲಿಕಾರ್ಜುನ ಚೌಕಾಶಿ
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ
ಅಭಯ ಪಾಟೀಲ
ಅಭಯ ಪಾಟೀಲ
ಮಂಗಲಾ ಅಂಗಡಿ
ಮಂಗಲಾ ಅಂಗಡಿ
ಎಸ್.ಎಸ್.ಮೆಳ್ಳಿಕೇರಿ
ಎಸ್.ಎಸ್.ಮೆಳ್ಳಿಕೇರಿ
ಸೀತವ್ವ ಜೋಡಟ್ಟಿ
ಸೀತವ್ವ ಜೋಡಟ್ಟಿ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಗಣೇಶ ರಾಠೋಡ
ಗಣೇಶ ರಾಠೋಡ

ಮಾಜಿ ದೇವದಾಸಿಯರಿಗೆ ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು ₹1500ರಿಂದ ₹2000ಕ್ಕೆ ಹೆಚ್ಚಿಸಿದ್ದು ಸಮಾಧಾನಕರ. ಆದರೆ ₹5000ಕ್ಕೆ ಏರಿಸಿದರೆ ಮಾತ್ರ ಅನುಕೂಲಕರ ಸೀತವ್ವ ಜೋಡಟ್ಟಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರು

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರ ಕಲೆ ಮತ್ತು ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಸಂಸ್ಕೃತಿ ಉತ್ಸವ ಆಯೋಜಿಸುವುದು ಮತ್ತು ಪ್ರತ್ಯೇಕ ಆಯೋಗ ರಚನೆ ಅಭಿನಂದನಾರ್ಹ –ಅಮೃತ ದಪ್ಪಿನವರ ಅಧ್ಯಕ್ಷ ಅಲೆಮಾರಿ ಅರೆಅಲೆಮಾರಿ ಒಕ್ಕೂಟ

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ–2023 ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಆದರೆ ಇದನ್ನು ನೆಪಕ್ಕೆ ಮಾತ್ರ ಮಾಡದೇ ಪರಿಣಾಮಕಾರಿ ಆಗಿಸಬೇಕು- ಮಲ್ಲಿಕಾರ್ಜುನ ಚೌಕಾಶಿ ವಕೀಲ ಗೋಕಾಕ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿರುವ ಸುಮಾರು 11 ಏತ ನೀರಾವರಿ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬರುತಿದ್ದು ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು ಶ್ಲಾಘನೀಯ –ಎಸ್.ಎಸ್.ಮೆಳ್ಳಿಕೇರಿ ಮಲಪ್ರಭಾ ನೀರಾವರಿ ಯೋಜನೆ ಫಲಾನುಭವಿ

ಏತನೀರಾವರಿ ಯೋಜನೆಗಳು ಕಳೆದ 20 ವರ್ಷದಿಂದ ಸ್ಥಗಿತವಾಗಿದ್ದು ಅವುಗಳ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ ಕ್ರಮ ಕೈಗೊಂಡಿದ್ದರಿಂದ ಜನ ಜಾನುವಾರುಗಳಿಗೆ ಉಪಯುಕ್ತವಾಗಲಿದೆ- ಶ್ರೀದೇವಿ ತಳವಾರ ಅಧ್ಯಕ್ಷೆ ಹೊಸೂರು ಗ್ರಾಮ ಪಂಚಾಯಿತಿ

ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಕ್ರಮ ವಹಿಸಿದ್ದು ಸ್ವಾಗತಾರ್ಹ. ಈ ದೇವಸ್ಥಾನಕ್ಕೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಅಭಿವೃದ್ಧಿಯಲ್ಲೂ ವಿಶೇಷ ಪ್ರಾತಿನಿಧ್ಯ ನೀಡಬೇಕು. - ಲಕ್ಷ್ಮಿ ಸುರಗೋಳ ಗೃಹಿಣಿ

ಗಣ್ಯರು ಏನಂತಾರೆ? ನಿರುತ್ಸಾಹದ ಬಜೆಟ್‌ ಇದೊಂದು ನಿರುತ್ಸಾಹ ಹಾಗೂ ಜನವಿರೋಧಿ ಬಜೆಟ್. ಜಿಲ್ಲೆಗೆ ಯಾವುದೇ ಮಹತ್ವದ ಅಭಿವೃದ್ಧಿ ಪರ ಯೋಜನೆ ಘೋಷಣೆ ಮಾಡಿಲ್ಲ. ಲೋಕಸಭಾ ಚುನಾವಣೆ ಗಮನದಲಿರಿಸಿ ಇದನ್ನು ತಯಾರಿಸಲಾಗಿದೆ. ಜನರ ಆಶೋತ್ತರಗಳಗೆ ಸೂಕ್ತ ಸ್ಪಂದನೆ ದೊರೆತಿಲ್ಲ. –ಮಂಗಲಾ ಅಂಗಡಿ ಸಂಸದೆ * ಅಭಿವೃದ್ಧಿ ಪರವಾಗಿಲ್ಲ ಬಜೆಟ್ ಬಡವರ ಹಾಗೂ ರೈತರ ಹಿತ ಕಾಪಾಡಿಲ್ಲ. ಗ್ಯಾರಂಟಿಗಳ ಭರಾಟೆಯಲ್ಲಿ ರಾಜ್ಯವನ್ನು ಆರ್ಥಿಕವಾಗಿ ಮತ್ತಷ್ಟು ದಿವಾಳಿಯತ್ತ ಕೊಂಡೊಯ್ಯಲಾಗಿದೆ. ಚಿಕ್ಕ ಹಾಗೂ ಬೃಹತ್ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತವನ್ನು ಸೆಳೆಯಲು ಜನತೆಯ ದಿಕ್ಕನ್ನು ತಪ್ಪಿಸುತ್ತಿದೆ. –ಪ್ರಭಾಕರಕ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ * ಇದು ಸುಳ್ಳಿನ ಕಂತೆ‌ ರಾಜ್ಯ ಬಜೆಟ್ ಸುಳ್ಳಿನ ಕಂತೆ‌. ಇದೊಂದು ‘ಮಂಗೇರಿ ಲಾಲ್ ಹಸಿನ್ ಸ‍ಪ್ನೆ’ ಎಂಬ ನಾಣ್ಣುಡಿ ನೆನೆಪಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗೊತ್ತು– ಗುರಿ ಇಲ್ಲದ ಬಜೆಟ್ ಮಂಡಿಸಿದೆ. ಕರ್ನಾಟಕದ ಅಭಿವೃದ್ಧಿ ಈ ಬಜೆಟ್‌ನಿಂದ ಅಸಾಧ್ಯ. –ಅಭಯ ಪಾಟೀಲ ಶಾಸಕ * ಅಂಗನವಾಡಿಗಳ ಅಭಿವೃದ್ಧಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಮೇಲ್ವಿಚಾರಕಿಯರ ಬಹುದಿನಗಳ ಬೇಡಿಕೆಯಾಗಿದ್ದ ಸ್ಮಾರ್ಟ್‌ಫೋನ್‌ಗಾಗಿ ₹90 ಕೋಟಿ ನೀಡಲಾಗಿದೆ. ಬಾಡಿಗೆ ಕಟ್ಟಡಗಳಲ್ಲಿರುವ 1000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತು ಆಶಾದಾಯಕ ಬೆಳವಣಿಗೆ. –ಲಕ್ಷ್ಮಿ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ * ಸರ್ಕಾರದ ಸೈದ್ಧಾಂತಿಕ ನಡೆ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ಅವಧಿಗಿಂತ ದುಪ್ಪಟ್ಟು ಹಣ ನೀಡಿರುವ ಕ್ರಮ ಅಭೂತಪೂರ್ವ ನಿರ್ಧಾರ. ಬಸವಣ್ಣ ನಾರಾಯಣ ಗುರು ಪೆರಿಯಾರ್ ರಾಮಸ್ವಾಮಿ ರಾಮಮನೋಹರ ಲೋಹಿಯಾ ಬಾಬು ಜಗಜೀವನ್ ರಾಮ್ ಅವರ ಕೃತಿಗಳ ಕನ್ನಡ ಅನುವಾದಗಳನ್ನು ಮಾಡಲು ಉದ್ದೇಶಿಸಿರುವುದು ಕನ್ನಡಿಗರನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವ ಪ್ರಯತ್ನ. –ಸತೀಶ ಜಾರಕಿಹೊಳಿ ಸಚಿವ ಲೋಕೋಪಯೋಗಿ ಇಲಾಖೆ  * 50 ಹೊಸ ಬಸ್‌ ಕಾಣಿಕೆ ಹೈಟೆಕ್‌ ತಂತ್ರಜ್ಞಾನ ಹೊಂದಿದ (ಬಿಎಸ್‌–6) 50 ಬಸ್‌ಗಳು ಬೆಳಗಾವಿಗೆ ಮಂಜೂರಾಗಿವೆ. ಫೆ.18ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ ಮೊಟ್ಟ ಮೊದಲ ಅನುಷ್ಠಾನ ಕಾರ್ಯಕ್ರಮ ಇದಾಗಿದೆ. –ಗಣೇಶ ರಾಠೋಡ ವಿಭಾಗೀಯ ನಿಯಂತ್ರಣಾಧಿಕಾರಿ ಎನ್‌ಡಬ್ಲ್ಯುಕೆಆರ್‌ಟಿಸಿ ಬೆಳಗಾವಿ * ಜಿಲ್ಲೆಗೆ ಪೂರಕವಾಗಿದೆ ಗೋಕಾಕ ಜಲಪಾತ ಮತ್ತು ಸವದತ್ತಿ ಯಲ್ಲಮ್ಮನ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸೋದ್ಯಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಪಡಿಸುವುದು ಸ್ವಾಗತಾರ್ಹ. ಜಿಲ್ಲೆಗೆ ಪೂರಕವಾದ ಬಜೆಟ್ ಇದು. –ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಹಿರೇಮಠ

ಈಡೇರದ ಬೇಡಿಕೆಗಳು * ಬೆಳಗಾವಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಸಿಬ್ಬಂದಿ ನಿಯೋಜನೆ ಮಾಡಿಲ್ಲ. * ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸುವ ಭರವಸೆ ಈಡೇರಿಸಿಲ್ಲ. * ವರ್ತುಲ ರಸ್ತೆಗೆ ರಾಜ್ಯದ ಪಾಲಿನ ಅನುದಾನ ಹಾಗೂ ಭೂ ಒತ್ತುವರಿಗೆ ಮನಸ್ಸು ಮಾಡಿಲ್ಲ. * ಕಿತ್ತೂರು ಕೋಟೆಯನ್ನು ₹100 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡುವ ಪ್ರಸ್ತಾವ ಕಳೆದ ಸರ್ಕಾರದಲ್ಲಿ ಇತ್ತು. ಅದನ್ನೂ ಕೈಬಿಡಲಾಗಿದೆ. * ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ 100 ಎಕರೆ ಒತ್ತುವರಿ ಮಾಡಿಕೊಳ್ಳಲು ಪ್ರಸ್ತಾವ ಕಳಿಸಲಾಗಿದೆ. ಆದನ್ನೂ ಸರ್ಕಾರ ಮರೆತಿದೆ. * ಈಗಿರುವ ಜಿಲ್ಲಾಧಿಕಾರಿ ಕಟ್ಟಡ ನೆಲಸಮ ಮಾಡಿ ಬಹುಮಹಡಿ ಕಟ್ಟಡ ನಿರ್ಮಿಸವ ಪ್ರಸ್ತಾವ ಪರಿಗಣಿಸಿಲ್ಲ. * ಬೆಳಗಾವಿ– ಧಾರವಾಡ ರೈಲು ಮಾರ್ಗಕ್ಕೆ ರಾಜ್ಯದ ಪಾಲಿನ ಹಣ ಬಿಡುಗಡೆ ಬಗ್ಗೆ ಹೇಳಿಲ್ಲ. * ಜಿಲ್ಲೆಗೆ ಬೇಕಾದ ಹೆಚ್ಚುವರಿ ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ಠಾಣೆ ಮಂಜೂರಾತಿ ಮಾಡಿಲ್ಲ. * ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳಿಗೆ ಉತ್ತೇಜನ ನೀಡಲು ‘ಐಸಿಡಿ’ ಸಾರಿಗೆ ವ್ಯವಸ್ಥೆ ಮಾಡಬೇಕು ಎಂಬ ವ್ಯಾಪಾರಸ್ಥರ ಬೇಡಿಕೆ ಈಡೇರಿಲ್ಲ. * ದ್ರಾಕ್ಷಿ ಬೆಳಗಾರರಿಗೆ ಶೀಥಲೀಕರಣ ಘಟಕ ನಿರ್ಮಿಸುವ ಸಂಬಂಧ ದಶಕದ ಹೋರಾಟಕ್ಕೆ ಬೆಲೆ ಕೊಟ್ಟಿಲ್ಲ. * ಜಿಲ್ಲೆಯಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮಾರುಕಟ್ಟೆ ಒದಗಿಸಬೇಕು ಎಂಬ ಕೂಗಿಗೆ ಸರ್ಕಾರ ಕಿವಿಗೊಟ್ಟಿಲ್ಲ.

Cut-off box - ಯಲ್ಲಮ್ಮನಗುಡ್ಡ ಗೋಕಾಕ ಫಾಲ್ಸ್‌ ಅಭಿವೃದ್ಧಿ ರಾಜ್ಯದ ಶಕ್ತಿಪೀಠವಾದ ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಮನಸ್ಸು ಮಾಡಿದ್ದು ಭಕ್ತ ಸಮೂಹಕ್ಕೆ ಖುಷಿ ತಂದಿದೆ. ಅಲ್ಲದೇ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸಲು ಅಧಿಸೂಚನೆ ಹೊರಡಿಸಿದ್ದೂ ದೊಡ್ಡ ಬೆಳವಣಿಗೆ. ವಿಶ್ವ ಪ್ರಸಿದ್ಧ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಲಾಗಿದೆ. ಆದರೆ ಇದರ ಸ್ವರೂಪ– ಅನುದಾನದ ಬಗ್ಗೆ ಏನನ್ನೂ ಹೇಳಿಲ್ಲದಿರುವುದು ನಿರಾಸೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT