ಸೋಮವಾರ, ಜನವರಿ 17, 2022
21 °C

ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಬಿಜೆಪಿ ಆಗ್ರಹ, ಜಿಲ್ಲಾಧಿಕಾರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಂದರ್ಭದಲ್ಲಿ ಭದ್ರತಾ ಲೋಪಕ್ಕೆ ಕಾರಣವಾಗಿರುವ ಕಾಂಗ್ರೆಸ್ ನೇತೃತ್ವದ ಪಂಜಾಬ್‌ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಅಡಳಿತ ಜಾರಿಗೆ ತರಬೇಕು’ ಎಂದು ಆಗ್ರಹಿಸಿ ಬಿಜೆಪಿ ಗ್ರಾಮಾಂತರ, ಮಹಾನಗರ ಜಿಲ್ಲೆ ಹಾಗೂ ಮಂಡಳದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಮಾತನಾಡಿ, ‘ದೇಶದ ಸಮಸ್ತ ಜನರ ಪ್ರತೀಕವಾಗಿರುವ ಪ್ರಧಾನಿಗೆ ಕಾಂಗ್ರೆಸ್ ಅಡಳಿತವಿರುವ ಪಂಜಾಬ್‌ ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವುದು ಖಂಡನೀಯ. ಉಗ್ರ ಸಂಘಟನೆಗಳ ಹಾವಳಿಯಿಂದ ತುತ್ತಾದ ಪ್ರದೇಶಗಳಲ್ಲೂ ಪ್ರಧಾನಿ ಅವರ ರಕ್ಷಣಾ ವ್ಯವಸ್ಥೆಗೆ ತೊಂದರೆ ಆಗಿರಲಿಲ್ಲ. ಆದರೆ, ಪಂಜಾಬ್‌ನಲ್ಲಿ ಆಗಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ’ ಎಂದು ದೂರಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ‘ದೇಶದಲ್ಲಿ ಹಿಂದೆಂದೂ ನಡೆಯಲಾರದ ಘಟನೆ ಪಂಜಾಬ್‌ನಲ್ಲಿ ಆಗಿದೆ. ಘನತೆಗೆ ಕಳಂಕ ತರಲಾಗಿದೆ. ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಮಾಡಲು ಅಲ್ಲಿನ ಸರ್ಕಾರ ಹೊರಟಿದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ’ ಎಂದು ಆರೋಪಿಸಿದರು.

ಮುಖಂಡ ಶಶಿಕಾಂತ ನಾಯಿಕ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಗುರು ಮೆಟಗುಡ್, ಯುವರಾಜ ಜಾಧವ, ಧನಂಜಯ ಜಾಧವ, ರತ್ನಾ ಗೋಧಿ, ರಾಜೇಂದ್ರ ಗೌಡಪ್ಪಗೋಳ, ಬಸವರಾಜ ಪರವನ್ನವರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು