ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟಿಸಂ’ ಜಾಗೃತಿಗೆ ಪೋಸ್ಟರ್‌ ಪ್ರದರ್ಶನ

ಕೆಎಲ್‌ಇಯಲ್ಲಿ ಫಿಸಿಯೊಥೆರಫಿ ಶಿಕ್ಷಣ
Last Updated 27 ಏಪ್ರಿಲ್ 2021, 6:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‍ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಫಿಸಿಯೊಥೆರಪಿ ವಿಭಾಗದಿಂದ ‘ಆಟಿಸಂ ಜಾಗೃತಿ ಮಾಸಾಚರಣೆ’ ಅಂಗವಾಗಿ ಏರ್ಪಡಿಸಿರುವ ಪೋಸ್ಟರ್‌ಗಳ (ಭಿತ್ತಿಪತ್ರ) ಪ್ರದರ್ಶನವನ್ನು ಕ್ರೆಡಾಯ್‌–ಕರ್ನಾಟಕ ಅಧ್ಯಕ್ಷ ಚೈತನ್ಯ ಕುಲಕರ್ಣಿ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ವೈದ್ಯಕೀಯ ಸೇವೆ ಉತ್ತಮಗೊಳಿಸಿ ಜನರಿಗೆ ಅಗತ್ಯ ಸೇವೆಯನ್ನು ಕಲ್ಪಿಸಲು ರೋಟರಿ ಸಂಸ್ಥೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ‘ಗಿಫ್ಟ್‌ ಆಫ್ ಲೈಫ್’ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಕಿಡ್ನಿ ಹಾಳಾದ ರೋಗಿಗಳಿಗೆ ಡಯಾಲಿಸಿಸ್, ನೇತ್ರ ಚಿಕಿತ್ಸೆ, ರಕ್ತದಾನದಂತ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇನ್ನೂ ವೈದ್ಯಕೀಯ ಸೇವೆ ಬಲಿಷ್ಠಗೊಳಿಸಿಲು ಅಗತ್ಯ ಸಹಕಾರ ಮತ್ತು ಸಹಾಯವನ್ನು ಒದಗಿಸಲು ಕಾರ್ಯಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ಬೇಕಾಗುತ್ತದೆ: ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ‘ಅನೇಕ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖಗೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದರೂ ರೋಗಿಗಳಿಗೆ ಫಿಸಿಯೊಥೆರಫಿಯು ಅತ್ಯವಶ್ಯವಾಗಿ ಬೇಕಾಗುತ್ತದೆ. ಈ ಮೊದಲು ಕೇವಲ ಮಣಿಪಾಲ ಕಾಲೇಜಿನಲ್ಲಿ ಮಾತ್ರ ಫಿಸಿಯೊಥೆರಫಿ ಶಿಕ್ಷಣ ನೀಡಲಾಗುತ್ತಿತ್ತು. ಈ ಭಾಗದ ವಿದ್ಯಾಥಿಗಳಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಪ್ರಥಮವಾಗಿ ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಅತ್ಯುತ್ತಮ ಪಠ್ಯಕ್ರಮ ಅಳವಡಿಸಿಕೊಂಡು ಬೋಧಿಸಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ವಿಭಾಗದಲ್ಲಿ 10 ರೀತಿಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಫಿಸಿಯೊಥೆರಫಿ ಶಿಕ್ಷಣ ‍ಪಡೆದವರು ಕೂಡ ‘ಡಾಕ್ಟರ್‌’ ಎಂಬ ಪದ ಬಳಸಲು ಅವಕಾಶ ಮಾಡಿಕೊಡಬೇಕು ಎಂದು ಮಂಡಳಿಗೆ ಒತ್ತಾಯಿಸಲಾಗಿದೆ. ಆದರೆ, ಅನೇಕ ರೀತಿಯ ಲಾಬಿಗಳ ಕಾರಣದಿಂದಾಗಿ ಸ್ಪಂದನೆ ಸಿಕ್ಕಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರೋಟರಿ ಸಂಸ್ಥೆಯ ಮೂಲಕ ನಮ್ಮ ಆಸ್ಪತ್ರೆ ಅನೇಕ ರೋಗಿಗಳ ಶಸ್ತ್ರಚಿಕಿತ್ಸಾ ಸೇವೆ ನೀಡುತ್ತಿದೆ. ಚರ್ಮ ಬ್ಯಾಂಕ್‌ ಸೇರಿದಂತೆ ಅನೇಕ ವೈದ್ಯಕೀಯ ಸೇವೆಯನ್ನು ಕಲ್ಪಿಸುತ್ತಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ತಿಳಿಸಿದರು.

ಫಿಸಿಯೊಥೆರಫಿ ಕಾಲೇಜಿನ ಪ್ರಾಚಾರ್ಯ ಡಾ.ಸಂಜೀವಕುಮಾರ ಮಾತನಾಡಿ, ‘ಅಂಗವಿಕಲತೆ ಹಾಗೂ ಸಂಪೂಣವಾಗಿ ಕೈ ಅಥವಾ ಕಾಲುಗಳನ್ನು ಕಳೆದುಕೊಂಡವರಿಗೆ ಅನುಕೂಲ ಕಲ್ಪಿಸಲು ಬ್ಲೇಡ್ ಕಾಲು ಹಾಗೂ ವಿವಿಧ ಕೃತಕ ಅಂಗಗಳನ್ನು ತಯಾರಿಸಲು ಕ್ರಮ ವಹಿಸಲಾಗುತ್ತಿದೆ. ಅಂಗವಿಕಲರೂ ಸಹಜ ಜೀವನ ಸಾಗಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಡಾ.ರಾಜೇಶ ಪವಾರ, ಡಾ.ಶಿಬಾನಿ, ಡಾ.ಬಬಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT