ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೀತಿ ಸಿದ್ದು, ಪರಮೇಶ್ವರ ವಿಡಿಯೊ ಹೊರಬರಬಹುದು: DK ವಿರುದ್ಧ ಜಾರಕಿಹೊಳಿ

Published 7 ಮೇ 2024, 6:06 IST
Last Updated 7 ಮೇ 2024, 6:06 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): 'ಪ್ರಜ್ವಲ್ ರೇವಣ್ಣ ಅವರಂತೆಯೇ ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರ ವಿಡಿಯೊಗಳೂ ಹೊರಬರಬಹುದು. ನಾನು ಅವರಿಗೆ ಸೂಚನೆ‌ ಕೊಡುತ್ತಿದ್ದೇನೆ; ಈಗಲೇ ಆ 'ಮಹಾನಾಯಕ'ನನ್ನು ತಡೆಯಿರಿ' ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನನ್ನ ಖಾಸಗಿ ವಿಡಿಯೊಗಳು ಹೊರಗೆ ಬಂದಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೆ. ಆ ಮಹಾನಾಯಕ ಬಹಳ ಪ್ರಭಾವಿ, ಹಣ ಇದ್ದವನು. ಏನು ಬೇಕಾದರೂ ಮಾಡಬಲ್ಲೆ ಎಂಬ ಸೊಕ್ಕು ಇದೆ. ಅವನಿಗೆ ಇತಿಶ್ರೀ ಹಾಡಬೇಕು' ಎಂದರು.

'ಸಿ.ಎಂ ಅವರಿಗೆ ಮುಂದೆ ಕೈ‌ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಡಿಯೊ ಪ್ರಕರಣಗಳಿಗೆ ಪಕ್ಷಾತೀತವಾಗಿ ಕೊನೆಹಾಡಿ' ಎಂದರು.

'ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಕೈವಾಡ ಇದೆ. ಎಲ್ಲ ಸಾಕ್ಷಿ, ದಾಖಲೆಗಳೂ ನನ್ನ ಬಳಿ ಇವೆ. ಪ್ರಜ್ವಲ್ ವಿಚಾರದಲ್ಲಿ ಪರೋಕ್ಷವಾಗಿ ಆರೋಪಿ ಎನ್ನುತ್ತಿದ್ದಾರೆ. ಆದರೆ, ನನ್ನ ವಿಚಾರದಲ್ಲಿ ನೇರ ಆರೋಪಿ' ಎಂದು ಪ್ರಶ್ನೆಯೊಂದಕ್ಕೆ‌ ಉತ್ತರಿಸಿದರು.

'ನನ್ನ ಪ್ರಕರಣ ಸಿಬಿಐಗೆ ಕೊಟ್ಟರೆ ಎಲ್ಲ ಸಾಕ್ಷಿ ಒದಗಿಸುತ್ತೇನೆ. ನನ್ನ ಕೇಸಿನಲ್ಲಿ ಶಿವಕುಮಾರ್ ಮಾತ್ರವಲ್ಲ; ನಮ್ಮವರೂ ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ನನಗೆ ಎಸ್.ಐ.ಟಿ ಮೇಲೆ ಆಗಲೂ ವಿಶ್ವಾಸ ಇರಲಿಲ್ಲ, ಈಗಲೂ ಇಲ್ಲ' ಎಂದರು.

'ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿಯಬೇಕೆಂದರೆ ಇಂಥ ಪ್ರಕರಣಗಳನ್ನು ಮೊದಲು‌ ಇಲ್ಲವಾಗಿಸಬೇಕು. ಜೂನ್ 4ರ ನಂತರ ನಾನು ಎಲ್ಲದಕ್ಕೂ ಇತಿಶ್ರೀ ಹಾಡುತ್ತೇನೆ' ಎಂದೂ ರಮೇಶ ಹೇಳಿದರು.

'ಪ್ರಜ್ವಲ್ ರೇವಣ್ಣ ಪ್ರಕರಣ ‌ಯಾರೂ ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ. ಬಹಳ ಕೆಟ್ಟ ಪ್ರಮಾಣದಲ್ಲಿ ಅನ್ಯಾಯ ಆಗಿದೆ. ರೇವಣ್ಣ ಅವರು ಕಾನೂನು ರೀತಿ ಹೋರಾಟ ಮಾಡಲಿ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT