ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲ ಈದ್ಗಾ ಮೈದಾನ, ಮಸೀದಿಗಳಲ್ಲಿ ಜನಜಂಗುಳಿ, ಸಾಮೂಹಿಕ ನಮಾಜ್, ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ

ಸುಡು ಬಿಸಿಲಲ್ಲೂ ಸಹಬಾಳ್ವೆಯ ನೆರಳು ನೀಡಿದ ಈದ್‌
Published 22 ಏಪ್ರಿಲ್ 2023, 6:14 IST
Last Updated 22 ಏಪ್ರಿಲ್ 2023, 6:14 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಈದ್‌ ಉಲ್‌ ಫಿತ್ರ್‌ ಸಂಭ್ರಮ ಕಳೆಗಟ್ಟಿತ್ತು. ರಂಜಾನ್‌ ಅಂಗವಾಗಿ ಒಂದು ತಿಂಗಳ ಉಪವಾಸ ಆಚರಿಸಿದ ಮುಸ್ಲಿಮರು, ಹಬ್ಬದ ಕೊನೆಯ ದಿನವನ್ನು ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಕಳೆದರು. ಹಲವು ಹಿಂದೂ, ಕ್ರೈಸ್ತ ಸಮುದಾಯದ ಮುಖಂಡರು ಕೂಡ ಹಬ್ಬದ ಶುಭಾಶಯ ಕೋರಿ ಸಹಬಾಳ್ವೆಯ ಸಂದೇಶ ಸಾರಿದರು.

ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿದ ಪುರುಷರು, ಮಕ್ಕಳು ನಮಾಜ್‌ ಮಾಡಿದರು. ಇಲ್ಲಿನ ನ್ಯಾಯಾಲಯ ಬಳಿ ಇರುವ ಈದ್ಗಾ ಮೈದಾನ, ಕೋಟೆ ಆವರಣದಲ್ಲಿರುವ ಪುರಾತನ ಕಾಲದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ನಗರದ ಎಲ್ಲ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9ರ ಸುಮಾರಿಗೆ ತಂಡೋಪ‍ ತಂಡವಾಗಿ ಬಂದರು. ಹೊಸ ಬಟ್ಟೆ ತೊಟ್ಟು ಬಂದಿದ್ದ ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಮಾಜ್ ನಂತರ ಪರಸ್ಪರರು ಹಬ್ಬದ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸಿದರು.

ಬೆಳಿಗ್ಗೆ 10.30ರ ಹೊತ್ತಿಗೆ ಚುರುಗುಟ್ಟುವ ಬಿಸಿಲ ಮಧ್ಯೆಯೂ ಮೈದಾನಗಳು ಕಿಕ್ಕಿರಿದು ತುಂಬಿತ್ತು. ಪ್ರಾರ್ಥನೆ ನಡೆದ ಬಳಿಕ ಪರಸ್ಪರ ಅಪ್ಪಿಕೊಂಡು ಈದ್‌ ಹಬ್ಬದ ಶುಭಾಶಯ ಕೋರುವ ದೃಶ್ಯ ಚಿಣ್ಣರಾದಿಯಾಗಿ ಹಿರಿಯರವರೆಗೂ ಕಂಡುಬಂತು. ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು. ಉಪವಾಸ ವೃತ ಮಾಡಿದ ಹಲವು ಮಕ್ಕಳು ಕೂಡ ಜುಬ್ಬಾ, ಟೋಪಿಗಳನ್ನು ಧರಿಸಿ ಗಮನ ಸೆಳೆದರು.‌

ಎಲ್ಲರ ಬದುಕಿನಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದ ಮೂಡಲಿ, ಸಂಕಷ್ಟಗಳಿಂದ ಪ್ರಪಂಚ ಸುರಕ್ಷಿತವಾಗಲಿ ಎಂದು ಪ್ರಾರ್ಥಿಸಿದ್ದಾಗಿ ಮೌಲ್ವಿಗಳು ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.

ಉಳಿದಂತೆ ಜಿಲ್ಲೆಯ ಎಲ್ಲ ಬೈಲಹೊಂಗಲ, ರಾಮದುರ್ಗ, ಸವದತ್ತಿ, ಚಿಕ್ಕೋಡಿ, ಹಿರೇಬಾಗೇವಾಡಿ ಸೇರಿದಂತೆ ಎಲ್ಲ ಪಟ್ಟಣಗಳಲ್ಲೂ ಪ್ರಾರ್ಥನೆಗೆ ಬರುವವರ ದಟ್ಟಣೆ ಹೆಚ್ಚಾಗಿತ್ತು. ಹಳ್ಳಿಗಳಲ್ಲಿ ಕೂಡ ಮಸೀದಿಗಳ ಮುಂದಿನ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಶ್ರದ್ಧೆ ಕಂಡುಬಂತು.

ಸಹಬಾಳ್ವೆಯ ಸಿಹಿ:

ನಂತರ ಮನೆಗಳಿಗೆ ತೆರಳಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಸಿಹಿ ಸುರಕುಂಬಾ (ಶೀರಕುರ್ಮಾ) ಕೊಟ್ಟರು. ಅನ್ಯ ಧರ್ಮದ ಸ್ನೇಹಿತರನ್ನೂ ಮನೆಗೆ ಆಹ್ವಾನಿಸಿ ಸಿಹಿ ನೀಡಿದರು. ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಭರ್ಜರಿ ತಯಾರಿ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT