ಶನಿವಾರ, ಡಿಸೆಂಬರ್ 3, 2022
21 °C

‘2ನೇ ಪ್ರಯತ್ನ, 670ನೇ ರ‍್ಯಾಂಕ್’‌ ಇದು ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ ಸಾಧನೆ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ‘ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಕಲಿತೆ. ಶಿಕ್ಷಕರು ಮತ್ತು ಪಾಲಕರ ಪ್ರೋತ್ಸಾಹ ಸಿಕ್ಕಿದೆ. ಅದರಿಂದ ಒಳ್ಳೆಯ ಸ್ಥಾನ ಪಡೆಯುವ ಕನಸು ಸಾಕಾರಗೊಂಡಿದೆ’.

– ಕೇಂದ್ರ ಲೋಕಸೇವಾ ಆಯೋಗ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ 670ನೇ ರ‍್ಯಾಂಕ್‌ ಗಳಿಸಿರುವ ಇಲ್ಲಿನ ಡಾ.ಅಂಬೇಡ್ಕರ್ ನಗರ ನಿವಾಸಿ ಪ್ರಿಯಾಂಕಾ ಕಾಂಬಳೆ ಹೇಳುವ ಮಾತಿದು.

ಅವರ ತಂದೆ ವಿಠ್ಠಲ ಅವರು ಮಾಜಿ ಸೈನಿಕ. ಮೂಲತಃ ಹುಕ್ಕೇರಿ ತಾಲ್ಲೂಕಿನ ಕೇಸ್ತಿ ಗ್ರಾಮದವರು. ಈಗ ಅರಣ್ಯ ಇಲಾಖೆಯಲ್ಲಿ ಗಾರ್ಡ್‌ ಆಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಮಲ್ಲಪ್ಪ ಗೃಹಿಣಿ. ತಂದೆ-ತಾಯಿ ಇಬ್ಬರೂ ದ್ವಿತೀಯ ಪಿಯುಸಿ ಓದಿದವರು.

ಭೀಮನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಸಿಟಿಇ ಸಂಸ್ಥೆಯ ಆರ್.ಎಂ. ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದ ಪ್ರಿಯಾಂಕಾ ಅವರು, ಇಲ್ಲಿನ ಕೆಎಲ್ಇ ಸಂಸ್ಥೆಯ ಬಿ.ಕೆ.ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದಾರೆ. ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಿ.ಎಸ್ಸಿ (ಅಗ್ರಿ)ಯಲ್ಲಿ ಶೇ.87.8ರಷ್ಟು ಅಂಕ ಗಳಿಸಿದ್ದಾರೆ.

ಅಣ್ಣ ಮಿಲಿಂದ ಕಾಂಬಳೆ ಸಂಶೋಧನಾ ಅಧ್ಯಯನದಲ್ಲಿ ತೊಡಗಿದ್ದರೆ, ತಂಗಿ ಪ್ರತೀಕ್ಷಾ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಇದನ್ನೂ ಓದಿ... ಐಎಎಸ್‌ ಅಧಿಕಾರಿಗಳ ಮಾತು ಸ್ಫೂರ್ತಿಯಾಯಿತು: ಜಗದೀಶ್

‘ಶಿಕ್ಷಕಿಯಾಗುವ ಕನಸು ಚಿಕ್ಕವಳಿದ್ದಾಗಿನಿಂದಲೂ ಇತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಮತ್ತು ಪಾಲಕರ ಪ್ರೋತ್ಸಾಹದಿಂದ ಜನಸೇವೆ ಮಾಡುವ ಸಂಕಲ್ಪದೊಂದಿಗೆ ಯುಪಿಎಸ್ಸಿ ಪರೀಕ್ಷೆಗೆ ಸಜ್ಜಾಗತೊಡಗಿದೆ. ಮೊದಲ ಪ್ರಯತ್ನದಲ್ಲಿ ವಿಫಲಗೊಂಡೆ. 2ನೇ ಬಾರಿಗೆ 670ನೇ ರ‍್ಯಾಂಕ್‌ ಬಂದಿದೆ. ಐಎಎಸ್ ಸಿಗಿದಿದ್ದರೆ ಇನ್ನೊಂದು ಸಲ ಪ್ರಯತ್ಮಿಸುವೆ’ ಎಂದು ಪ್ರಿಯಾಂಕಾ ಹೇಳಿದರು.

‘2017ರಲ್ಲಿ ಸಮಾಜಕಲ್ಯಾಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್‌ ನೀಡುವುದಕ್ಕಾಗಿ ನಡೆಸಿದ ಪರೀಕ್ಷೆಯಲ್ಲಿ ನನ್ನ ಮಗಳು ರಾಜ್ಯಕ್ಕೆ 17ನೇ ಸ್ಥಾನ ಗಳಿಸಿದ್ದಳು ಮತ್ತು ವಿದ್ಯಾರ್ಥಿನಿಯರಲ್ಲಿ ಮೊದಲ ಸ್ಥಾನ ಗಳಿಸಿದ್ದಳು. ಇದರಿಂದ ಸರ್ಕಾರವೇ ಯುಪಿಎಸ್‌ಸಿ ಪರೀಕ್ಷೆ ಕೋಚಿಂಗ್‌ಗೆ ಆರ್ಥಿಕವಾಗಿ ನೆರವಾಯಿತು. ಇದರಿಂದ ಬಹಳ ಸಹಕಾರಿಯಾಯಿತು. ಮಗಳ ಸಾಧನೆ ಖುಷಿ ತಂದಿದೆ’ ಎಂದು ಮಲ್ಲವ್ವ ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು