ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣ ಪ್ರತಿಮೆ ಭಗ್ನ: ಬೆಳಗಾವಿಯಲ್ಲಿ ನಿಷೇಧಾಜ್ಞೆ 20ರವರೆಗೆ ವಿಸ್ತರಣೆ

Last Updated 18 ಡಿಸೆಂಬರ್ 2021, 18:18 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಘಟನೆಗೆ ಆಕ್ರೋಶ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಉದ್ವಿಗ್ವ ಸ್ಥಿತಿ ತಲೆದೋರಿದೆ. ಶಾಂತಿ ಕದಡುವ ಎಂಇಎಸ್‌ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಿಡಿಗೇಡಿಗಳು ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶನಿವಾರ ನಸುಕಿನಲ್ಲಿ ಭಗ್ನಗೊಳಿಸಿದ್ದಾರೆ. ಮುಖದ ಭಾಗ ವಿರೂಪಗೊಂಡಿದೆ. ಖಡ್ಗ ಮತ್ತು ಗುರಾಣಿಯನ್ನು ಕಿತ್ತು ಹಾಕಿದ್ದಾರೆ. ನಗರದ ವಿವಿಧೆಡೆ ಕಲ್ಲು ತೂರಾಟ ನಡೆಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಪೊಲೀಸ್‌ ಜೀಪ್‌ಗೆ ಬೆಂಕಿ ಹಚ್ಚಲಾಗಿದೆ.

ಮುಂಜಾಗ್ರತೆ ಕ್ರಮವಾಗಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಡಿ.20ರ ಬೆಳಿಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಲ್ಲುತೂರಾಟ, ಪ್ರತಿಭಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಕೋರ್ಟ್‌ ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಬಂಧಿತರಲ್ಲಿ ಬಹುತೇಕರು ಎಂಇಎಸ್‌ ಕಾರ್ಯಕರ್ತರು ಎಂದು ತಿಳಿದುಬಂದಿದೆ.

ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದು
ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದು

ಸರ್ಕಾರಿ ವಾಹನಗಳೇ ಗುರಿ:ಸರ್ಕಾರಿ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಆರು ಸರ್ಕಾರಿ ಕಾರುಗಳು, ಆರು ಪೊಲೀಸ್‌ ಜೀಪ್‌ಗಳು, ಮನೆಗಳ ಮುಂದೆ ನಿಲ್ಲಿಸಿದ್ದ, ನ್ಯೂಕ್ಲಿಯಸ್‌ ಮಾಲ್‌ಗೆ ಚಲನಚಿತ್ರ ವೀಕ್ಷಣೆಗೆ ಬಂದಿದ್ದವರ ಕಾರುಗಳು ಸೇರಿ 20ಕ್ಕೂ ಹೆಚ್ಚಿನ ವಾಹನಗಳ ಗಾಜುಗಳು ಪುಡಿಯಾಗಿವೆ. ಪೊಲೀಸ್‌ ಜೀಪಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲುತೂರಾಟ ಕೃತ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

‘ಈ ಬಗ್ಗೆ ಕ್ಯಾಂಪ್ ಮತ್ತು ಖಡೇಬಜಾರ್‌ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಬೃಹತ್‌ ಪ್ರತಿಭಟನೆ: ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಶುಕ್ರವಾರ ತಡರಾತ್ರಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್), ಶ್ರೀರಾಮಸೇನಾ ಹಿಂದೂಸ್ತಾನ ಸೇರಿದಂತೆ ವಿವಿಧ ಸಂಘಟನೆಗಳವರು, ಮರಾಠಿಗರು ಪ್ರತಿಭಟನೆ ನಡೆಸಿದರು. ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಜರುಗಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖಂಡರ ಜೊತೆಗೆ ಡಿಸಿಪಿ ಅಮಟೆ ಚರ್ಚಿಸುತ್ತಿರುವಾಗಲೇ ಕಿರ್ಲೋಸ್ಕರ್‌ ರಸ್ತೆಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಮೇಲೆಕೆಲವರು ಕಲ್ಲು ತೂರಿದರು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಹಲವೆಡೆ ಕಲ್ಲು ತೂರಾಟ : ಸಂಭಾಜಿ ವೃತ್ತ, ಕೇಳ್ಕರ್ ಬಾಗ್, ರಾಮಲಿಂಗಖಿಂಡ್ ಗಲ್ಲಿ, ಬಾಪಟ್ ಗಲ್ಲಿ ತಿರುವು, ಶಿವಾಜಿ ರಸ್ತೆ, ಮಹಾದ್ವಾರ ರಸ್ತೆ, ಶಾಂತಿ ಗ್ರ್ಯಾಂಡ್ ಹೋಟೆಲ್, ಕುಲಕರ್ಣಿ ‌ಗಲ್ಲಿ ಮತ್ತು ಪಾಟೀಲ ಗಲ್ಲಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಸೂರ್ಯ ಯಾತ್ರಿನಿವಾಸ ಹೋಟೆಲ್ ಬಳಿ ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟದಿಂದ ಪೊಲೀಸ್ ಜೀಪ್‌ನ ಗಾಜು ಒಡೆದಿದೆ
ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟದಿಂದ ಪೊಲೀಸ್ ಜೀಪ್‌ನ ಗಾಜು ಒಡೆದಿದೆ

ಎಂಇಎಸ್‌ ಕಾರ್ಯಕರ್ತರ ಹೈಡ್ರಾಮಾ
ಶಿವಾಜಿ ಪ್ರತಿಮೆಗೆ ಅವಮಾನ ಖಂಡಿಸಿ ಪ್ರತಿಭಟಿಸಲು ಇಲ್ಲಿನ ಛತ್ರಪತಿ ಶಿವಾಜಿ ಉದ್ಯಾನದ ಬಳಿಗೆ ಶನಿವಾರ ಬೆಳಿಗ್ಗೆ ಗುಂಪುಗೂಡಿದ ಎಂಇಎಸ್‌ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಪ್ರತಿಭಟನೆಗೆ ಅವಕಾಶ ನೀಡದೇ ಅವರನ್ನು ಪೊಲೀಸರು ಚದುರಿಸಿದರು.

ಉದ್ಯಾನದ ಗೇಟ್‌ಗೆ ಬೀಗ ಹಾಕಿ ಭದ್ರತೆ ಹಾಕಲಾಗಿತ್ತು. ‘ನಿಷೇಧಾಜ್ಞೆ ಇದ್ದು, ಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ತಿಳಿಸಿದರೂ, ಗುಂಪಿನೊಂದಿಗೆ ಒಳನುಗ್ಗಲು ಯತ್ನಿಸಿದ ಮುಖಂಡರಾದ ಶಿವಾಜಿ ಸುಂಟಕರ ಹಾಗೂ ಪ್ರಕಾಶ ಶಿರೋಳಕರ ಸೇರಿ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ಬಾವುಟಕ್ಕೆ ಅವಮಾನ: ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ
ಬೆಳಗಾವಿ:
ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ, ಮೀರಜ್ ಹಾಗೂ ಸಾಂಗ್ಲಿ ಮೊದಲಾದ ಕಡೆ ಶಿವಸೇನೆಯ ಕಾರ್ಯಕರ್ತರು ಕರ್ನಾಟಕದ ನೋಂದಣಿಯ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಅಲ್ಲಲ್ಲಿ ವಾಹನಗಳನ್ನು ತಡೆದು ಕೇಸರಿಬಣ್ಣ ಹಚ್ಚಿದ್ದಾರೆ. ಕನ್ನಡಿಗರ ಹೋಟೆಲ್ ಮತ್ತು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅವಮಾನ ಖಂಡಿಸಿ ಪ್ರತಿಭಟನೆ ನೆಪದಲ್ಲಿ, ಕನ್ನಡಿಗರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲ್ಹಾಪುರದಲ್ಲಿ ಕನ್ನಡ ಬಾವುಟಕ್ಕೆ ಕೆಲವರು ಬೆಂಕಿಹಚ್ಚಿದ್ದಾರೆ. ಕನ್ನಡ ಬಾವುಟ ಮೇಲೆ‌ ನಾಯಿ ಕೂರಿಸಿ, ಚಪ್ಪಲಿ ಇಟ್ಟು ಅವಮಾನ ಮಾಡಿದ್ದು,ಇದರ ವಿಡಿಯೊಗಳು ವೈರಲ್ ಆಗಿವೆ. ಇದರಿಂದ ಅಲ್ಲಿರುವ ಹಾಗೂ ಆ ರಾಜ್ಯದ ಗಡಿಯಲ್ಲಿರುವ ಕನ್ನಡ ಭಾಷಿಕರು ಆತಂಕಕ್ಕೆ ಒಳಗಾಗಿದ್ದಾರೆ.

‘ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿ ನಗರ, ಜಿಲ್ಲೆಯ ವಿವಿಧೆಡೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ
ಬೆಳಗಾವಿ:
ಇಲ್ಲಿನ ಅನಗೋಳ ಕನಕದಾಸ ಕಾಲೊನಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.ತಿಲಕವಾಡಿ ಠಾಣೆ ಪೊಲೀಸರು ಪ್ರತಿಮೆಯನ್ನು ಮುಂಜಾಗ್ರತೆಯಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.

‘ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಹೊಸ ಪ್ರತಿಮೆ ಮರುಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿ ರಾಯಣ್ಣನ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರು ತಿಲಕವಾಡಿ ಠಾಣೆ ಹಾಗೂ ಚನ್ನಮ್ಮ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಸುಳಗಾ ಗ್ರಾಮದ ಸಂಭಾಜಿ ಗಲ್ಲಿಯಲ್ಲಿ ರಾಯಣ್ಣ ನಾಮಫಲಕಕ್ಕೆ ಕೇಸರಿಬಣ್ಣ ಎರಚಲಾಗಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದದ್ದು ಯಾವಾಗ ಎನ್ನುವುದು ಖಚಿತವಾಗಿಲ್ಲ.

ಎಂಇಎಸ್ ವಿರುದ್ಧ ಕಠಿಣ ಕ್ರಮ: ಸಿ.ಎಂ
ಬೆಳಗಾವಿ
: ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿಗೆ ತೆರಳಲು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಅವರು ಮಾತನಾಡಿದರು.

‘ಕಲ್ಲುತೂರಿ ಪುಂಡಾಟ ನಡೆಸಿದವರ ವಿರುದ್ಧ ಪೊಲೀಸರು ಕ್ರಮಗೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ವೈಫಲ್ಯದ ಪ್ರಶ್ನೆ ಇಲ್ಲ. ತನಿಖೆ ನಡೆಸಿ ಕ್ರಮ ಜರುಗಿಸಲು ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಸೂಚಿಸಿದ್ದೇನೆ’ ಎಂದರು.

‘ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಎರಡೂ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಇಲಾಖೆಯ ಕಾರ್ಯದರ್ಶಿಗಳುಚರ್ಚೆ ನಡೆಸಲಿದ್ದಾರೆ. ಅಗತ್ಯ ಬಿದ್ದರೆ, ನಾನೂ ಮಹಾರಾಷ್ಟ್ರದ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ’ ಎಂದರು.

*

ಮುಖ್ಯಮಂತ್ರಿಯವರೇ, ಇದಕ್ಕೆಲ್ಲ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಮೊಂಡುವಾದ ಮಂಡಿಸಬೇಡಿ. ಇಂತಹ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ

*

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡಿರುವ ಘಟನೆ ಅಕ್ಷಮ್ಯ, ಖಂಡನೀಯ. ಹದ್ದು ಮೀರಿದ ವರ್ತನೆ ಸಹಿಸಲು ಸಾಧ್ಯವಿಲ್ಲ.
-ಬಿ.ಎಸ್.ಯಡಿಯೂರಪ್ಪ, ಶಾಸಕ

*

ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿರುವುದು ಕನ್ನಡಿಗರಿಗಷ್ಟೇ ಮಾಡಿದ ದ್ರೋಹವಲ್ಲ. ಇಡೀ ದೇಶಕ್ಕೇ ಬಗೆದ ದ್ರೋಹ. ಇದು ಅತ್ಯಂತ ಹೇಯ ಕೃತ್ಯ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

*

ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಕೃತ್ಯ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕ್ಕೆಗೊಳ್ಳಬೇಕು.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿಯನ್ನು ಪ್ರೋತ್ಸಾಹಿಸಿದ್ದರ ಪರಿಣಾಮ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಭಗ್ನ ಮತ್ತು ದಾಂದಲೆ ನಡೆದಿದೆ.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

*

ನಮ್ಮವರೂ ಕಲ್ಲು ತೂರಬೇಕು ಎಂದು ಹೇಳುವುದಿಲ್ಲ. ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ನ್ಯೂಟನ್‌ನ ಮೂರನೇ ನಿಯಮ ಅನುಸರಿಸಲೇ ಬೇಕಾಗುತ್ತದೆ. ಇದನ್ನು ಎಂಇಎಸ್‌ನವರು ಅರ್ಥ ಮಾಡಿಕೊಳ್ಳಬೇಕು.
-ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT