ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

Published 18 ಮೇ 2024, 4:58 IST
Last Updated 18 ಮೇ 2024, 4:58 IST
ಅಕ್ಷರ ಗಾತ್ರ

ಬೆಳಗಾವಿ: ‘ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಆರೋಪಿ ಗಿರೀಶ ಸಾವಂತಗೆ ಗಲ್ಲುಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ನಗರದಲ್ಲಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.

‘ಅಂಜಲಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಕುರಿತು ಪೊಲೀಸರಿಗೆ ಮೌಖಿಕವಾಗಿ ದೂರು ನೀಡಲಾಗಿತ್ತು. ಅವರು ನಿರ್ಲಕ್ಷ್ಯ ತೋರಿದ್ದರಿಂದ ಹತ್ಯೆಯಾಯಿತು. ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದ ಸಂದರ್ಭವೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ, ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ’ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ, ‘ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಎರಡನೇ ಕೊಲೆ ಇದಾಗಿದೆ. ಈ ಬೆಳವಣಿಗೆ ಗಮನಿಸಿದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅಂಜಲಿ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಂಜಲಿ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ ಪೂಜಾರಿ, ‘ನೇಹಾ ಹಿರೇಮಠ ಕೊಲೆ ಪ್ರಕರಣವನ್ನೇ ಜನರು ಇನ್ನೂ ಮರೆತಿಲ್ಲ. ಹೀಗಿರುವಾಗ ಮತ್ತೊಂದು ಕೊಲೆ ನಡೆದಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಮಹಿಳೆಯರ ಸುರಕ್ಷತೆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರದಂವಾಡೆ, ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ್, ನಗರ ಘಟಕದ ಅಧ್ಯಕ್ಷ ಸಿದಗೌಡ ಸುಣಗಾರ, ಯುವ ಘಟಕದ ಅಧ್ಯಕ್ಷ ಅಪ್ಪಯ್ಯ ರಾಮರಾವ್, ತಾಲೂಕು ಘಟಕದ ಅಧ್ಯಕ್ಷೆ ಗೀತಾ ಕೋಳಿ, ಅಶೋಕ ಶಿರಗೆ, ಲಕ್ಷ್ಮಣ ಯಮಕನಮರಡಿ, ಕಾಶಪ್ಪ ಕೋಳಿ, ಮಲ್ಲಪ್ಪ ಮುರಗೋಡ, ಸಾಗರ ಕೋಳಿ, ರವಿ ಪೂಜಾರ, ಕೃಷ್ಣಭಟ್, ವಿಜಯ ಜಾಧವ, ಅಪ್ಪಾಸಾಹೇಬ ಪೂಜಾರ ಇದ್ದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌, ವಿಶ್ವ ಹಿಂದೂ ಪರಿಷತ್‌ ಮತ್ತಿತರ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT