ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಹಕ್ಕು ನೀಡಲು ಆಗ್ರಹಿಸಿ ಪ್ರತಿಭಟನೆ

ಚನ್ನಮ್ಮನ ಕಿತ್ತೂರಿನಿಂದ ಬೆಳಗಾವಿ ಡಿ.ಸಿ ಕಚೇರಿವರೆಗೆ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದ ರೈತರು
Last Updated 9 ಸೆಪ್ಟೆಂಬರ್ 2022, 3:12 IST
ಅಕ್ಷರ ಗಾತ್ರ

ಬೆಳಗಾವಿ: ಸಾಗುವಳಿ ಹಕ್ಕು ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಕಿತ್ತೂರಿನ ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಕೆಲಕಾಲ ಧರಣಿ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕುಲವಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಜಾನುವಾರುಗಳ ಸಮೇತ ಧರಣಿಯಲ್ಲಿ ಪಾಲ್ಗೊಂಡರು. ಕಿತ್ತೂರಿನಿಂದ ಟ್ರ್ಯಾಕ್ಟರ್‌ಗಳ ಮೂಲಕ ಹೊರಟ ರೈತರು ಬೆಳಗಾವಿ ತಲುಪಿ ಅಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಘೋಷಣೆ ಮೊಳಗಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲೇಬೇಕು ಎಂದು ಹಠ ಹಿಡಿದರು.

ಬಿಷ್ಟಪ್ಪ ಶಿಂಧೆ ಮಾತನಾಡಿ, ‘ಕಿತ್ತೂರು ತಾಲ್ಲೂಕಿನ ಒಂಬತ್ತು ಹಳ್ಳಿಗಳಲ್ಲಿ ನೂರಾರು ವರ್ಷಗಳಿಂದ ನಮ್ಮ ಹಿರಿಯರ ಕಾಲದಿಂದಲೂ ನಾವು ಜೀವನ ಸಾಗಿಸುತ್ತ ಬಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ
ಕಾಗೋಡು ತಿಮ್ಮಪ್ಪ ಅವರು ಖುದ್ದಾಗಿ ನಮ್ಮ ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಗರ್‌ಹುಕುಂ ಕಾಯ್ದೆಯಲ್ಲಿ ಭೂಮಿ ಹಂಚಿಕೆ ಮಾಡುತ್ತೇವೆ ಎಂದಿದ್ದರು. ಆದರೆ, ನಂತರ ಬಂದ ಸರ್ಕಾರ ಅದನ್ನು ತಡೆ ಹಿಡಿದಿದೆ. ಈಗಲಾದರೂ ಸಾಗುವಳಿ ಹಕ್ಕು ನೀಡದೇ ಇದ್ದರೆ ಕುಟುಂಬ ಹಾಗೂ ಜಾನುವಾರುಗಳ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಹೋರಾಟಗಾರ ಬಿ.ಎಚ್.ನಿರಲಕೇರಿ ಮಾತನಾಡಿ, ಬಗರ್‌ ಹುಕುಂ ಯೋಜನೆಯಡಿ ರೈತರು ಸಲ್ಲಿಸಿರುವ 14 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಕೈ ಬಿಟ್ಟಿದ್ದಾರೆ. ಅಧಿಕಾರಿಗಳನ್ನು ರೈತರು ಭೇಟಿ ಆಗಲು ಬಂದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. 20 ದಿನದ ಹಿಂದೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಹಕ್ಕು ಪತ್ರ ವಿತರಣೆಗೆ 20 ದಿನಗಳ ಗಡವು ನೀಡಿದ್ದೆವು. ಆದರೆ ಈಗಿನ ಸಚಿವ ಸಂಪುಟ ಸಭೆಯಲ್ಲಿ ಜಮೀನನ್ನು ರೈತರಿಗೆ ಬಾಡಿಗೆ ರೂಪದಲ್ಲಿ ನೀಡುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ. ಹೀಗಾಗಿ ಸರ್ಕಾರದ ನಿರ್ಣಯ ಖಂಡಿಸಿ 9 ಹಳ್ಳಿಗಳ ರೈತರೊಂದಿಗೆ ಪ್ರತಿಭಟನೆ ಮಾಡುತ್ತಿದ್ದೇವೆ. ತಕ್ಷಣವೇ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ರೈತರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕು ಎಂದು
ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ
ಸ್ಥಳಕ್ಕೆ ಬಂದು ಮನವಿ ಪಡೆದರು. ರೈತರ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT