ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿ.ಪಂ ಕಚೇರಿ ಮುಂದೆ ಹಿರಿಯರ ಧರಣಿ

ನಿವೃತ್ತ ಆಯಾಗಳ ಬೇಸಿಗೆ ರಜೆಯ ಬಾಕಿ ವೇತನ ಹಾಗೂ ತಡೆಹಿಡಿದ ವೇತನ ನೀಡಲು ಆಗ್ರಹ
Last Updated 4 ಫೆಬ್ರುವರಿ 2023, 5:59 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಆಯಾಗಳ ಬೇಸಿಗೆ ರಜೆಯ ಬಾಕಿ ವೇತನ ನೀಡಬೇಕು ಹಾಗೂ ತಡೆಹಿಡಿಯಲಾದ ಆರು ತಿಂಗಳ ವೇತನವನ್ನೂ ಕೊಡಮಾಡಬೇಕು ಎಂದು ಆಗ್ರಹಿಸಿ, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಹಿರಿಯರು ಜಿಲ್ಲಾ ಪಂಚಾಯಿತಿ ಮುಂದೆ ಶುಕ್ರವಾರ ಇಡೀ ದಿನ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ನೇತೃತ್ವದಲ್ಲಿ ಸೇರಿದ ಹಲವು ಮಹಿಳೆಯರು ಧರಣಿ ಕುಳಿತರು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಧಿಕ್ಕಾರ ಕೂಗಿದರು.

ಜಿಲ್ಲೆಯ ಹಲವು ಆಯಾಗಳ 2002ರಿಂದ 2012ರ ವರೆಗಿನ ಬೇಸಿಗೆ ರಜೆ ಬಾಕಿ ವೇತನ ತಡೆಯಲಾಗಿದೆ. ಇದನ್ನು ನೀಡುವಂತೆ ವರ್ಷದುದ್ದಕ್ಕೂ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ಅಧಿಕಾರಿಗಳು ಇಲಾಖೆಯಿಂದ ಇಲಾಖೆಗೆ ಅಲೆದಾಡಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ನಾವು ಸೇವಾ ನಿವೃತ್ತಿ ಹೊಂದಿದ್ದೇವೆ. ಈಗ ವಯಸ್ಸು ಹೆಚ್ಚಾಗಿದೆ. ನಡೆದಾಡುವ ಶಕ್ತಿ ಇಲ್ಲ. ಇಂಥದರಲ್ಲಿ ನಮ್ಮ ಹಕ್ಕಿನ ಪಾಲು ಕೇಳುವುದಕ್ಕೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದೂ ಅವರು ಆಕ್ರೋಶ ಹೊರಹಾಕಿದರು.

ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಬೇಸಿಗೆಯ ಬಾಕಿ ವೇತನ ನೀಡಲಾಗಿದೆ. ಆದರೆ, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಹಲವರ ವೇತನ ಇನ್ನೂ ಬಂದಿಲ್ಲ. ಮುಪ್ಪಿನ ವಯಸ್ಸಿನಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಮಾನವೀಯತೆ ಹಿನ್ನೆಲೆಯಲ್ಲಾದರೂ ಅಧಿಕಾರಿಗಳು ನೆರವಿಗೆ ಬರಬೇಕಿತ್ತು. ಅದನ್ನು ಬಿಟ್ಟು ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜಯಶ್ರೀ ಊಟಿ ದೂರಿದರು.

‘ಬೇಸಿಗೆ ರಜೆಯ ಬಾಕಿಯೇ ₹98.54 ಲಕ್ಷ ಉಳಿಸಿಕೊಂಡಿದ್ದಾರೆ. ಕ್ಷೇತ್ರಶಿಕ್ಷಣಾಧಿಕಾರಿ ಬಳಿ ಕೇಳಲು ಹೋದರೆ ಜಿಲ್ಲಾ ಪಂಚಾಯಿತಿಗೆ ಹೋಗಿ ಕೇಳಿ ಎನ್ನುತ್ತಾರೆ. ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಆಗಿದೆ, ಶಿಕ್ಷಣಾಧಿಕಾರಿಗಳನ್ನೇ ಕೇಳಿ ಎಂದು ಅಲ್ಲಿನ ಅಧಿಕಾರಿ ಹೇಳುತ್ತಾರೆ. ಧಾರವಾಡದಲ್ಲಿ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ’ ಎಂದರು.

2018 ಹಾಗೂ 2019ರ ಸಾಲಿನಲ್ಲಿ ದುಡಿಸಿಕೊಂಡ ಆರು ತಿಂಗಳ ಸಂಬಳ ಕೂಡ ಬಂದಿಲ್ಲ. ಪ್ರತಿಯೊಬ್ಬ ಆಯಾಗೂ ₹ 17 ಸಾವಿರ ಸಂಬಳವಿದೆ. ಇದನ್ನೂ ಅಧಿಕಾರಿಗಳು ಏಕೆ ಉಳಿಸಿಕೊಂಡಿದ್ದಾರೋ ಗೊತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆ ಆಗಿದೆ ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿ ಕಳುಹಿಸುತ್ತಾರೆ. ಆದರೆ, ದುಡಿದ ಕೈಗಳಿಗೆ ಮಾತ್ರ ಸಂಬಳ ಸಿಕ್ಕಿಲ್ಲ’ ಎಂದರು.

ಈ ವೇಳೆ ಸ್ಥಳಕ್ಕೆ ಬಂದ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ಡಿಡಿಪಿಐಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದರೂ ಧರಣಿ ನಿರತರು ಸ್ಥಳ ಬಿಟ್ಟು ಕದಲಲಿಲ್ಲ. ಸಂಜೆ 6ಕ್ಕೆ ಬಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಎಚ್‌.ವಿ.ದರ್ಶನ್‌ ಭರವಸೆ ನೀಡಿದ ನಂತರ ಸ್ಥಳದಿಂದ ತೆರಳಿದರು.

ಸಂಘದ ಅಧ್ಯಕ್ಷೆ ಪ್ರಿಯಾ ಊಟಿ, ಉಪಾಧ್ಯಕ್ಷೆ ಕಮಲವ್ವ ಜೈನಾಪುರ, ಮುಖಂಡರಾದ ಗಮಗಮ್ಮ ಕನಕಗಿರಿ, ಎಂ.ಸುಮಂಗಲಾ, ಸುಶೀಲಮ್ಮ, ಶಾರದಾಬಾಗಿ, ಶಶಿಕಲಾ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT