ಭಾನುವಾರ, ಫೆಬ್ರವರಿ 28, 2021
31 °C
ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬಿಎ ಪದವೀಧರ

Pv Web Exclusive | ಸಾಫ್ಟ್‌ವೇರ್‌ ಕಂಪನಿ ಬಿಟ್ಟವ ಈಗ ಪಂಚಾಯಿತಿ ಮೆಂಬರ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಾಫ್ಟ್‌ವೇರ್ ಕಂಪನಿಯಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ತ್ಯಜಿಸಿ ಹಳ್ಳಿಗೆ ಹಿಂದಿರುಗಿರುವ ಎಂಬಿಎ ಪದವೀಧರ ವಿಜಯ ಕುಲಿಗೋಡ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಳ್ಳಿಕೇರಿ ಗ್ರಾಮದ 5ನೇ ವಾರ್ಡ್‌ನಿಂದ 387 ಮತಗಳನ್ನು ಗಳಿಸಿ, 6 ಮತಗಳ ಅಂತರದಿಂದ ಜಯಿಸಿದ್ದಾರೆ.

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದ ಅವರು,  ಕ್ಯಾಂಪಸ್‌ ಸಂದರ್ಶನದಲ್ಲಿ ಐಬಿಎಂ ಗ್ಲೋಬಲ್‌ ಸರ್ವಿಸ್ ಕಂಪನಿಯ ಕೆಲಸಕ್ಕೆ ಆಯ್ಕೆಯಾಗಿದ್ದರು. ಫೈನಾನ್ಸ್ ಅಂಡ್ ಅಕೌಂಟ್ ಟೀಮ್ ಲೀಡರ್‌ ಅಗಿದ್ದರು. ಈ ನಡುವೆ, ಊರಿನಲ್ಲಿದ್ದ ತಾಯಿ ನಿಧನರಾದರು. ಒಬ್ಬಂಟಿಯಾದ ತಂದೆ ಕರೆಪ್ಪ ಕುಲಿಗೋಡ (ಬುದ್ನಿಗೌಡರ) ಅವರ ಜೊತೆಗಿದ್ದು ನೋಡಿಕೊಳ್ಳಲು 2016ರಲ್ಲಿ ಊರಿಗೆ ಮರಳಿದ್ದರು.

ಕೃಷಿಕರೂ ಆಗಿದ್ದಾರೆ

ಊರಿನಲ್ಲಿ 25 ಎಕರೆ ಜಮೀನು ಹೊಂದಿರುವ ಅವರು, ಬೆಂಗಳೂರಿನಿಂದ ಬಂದ ಮೇಲೆ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿದ್ದಾರೆ. ಸದ್ಯ 4 ಎಕರೆ ಬಾಳೆ ಹಾಗೂ 10 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಊರಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಿಗೆ ಮತದಾರರು ಬೆಂಬಲ ನೀಡಿದ್ದಾರೆ. ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

‘ವಿದ್ಯಾಭ್ಯಾಸಕ್ಕಾಗಿ ಚಿಕ್ಕಂದಿನಿಂದಲೂ ನಾನು ಹೊರಗಡೆಯೇ ಇದ್ದೆ. ತಾಯಿಯ ಅಕಾಲಿಕ ನಿಧನದಿಂದ ನಾನು ಬೆಂಗಳೂರಿನಿಂದ ಊರಿಗೆ ಮರಳಬೇಕಾಯಿತು. ಐಬಿಎಂನಲ್ಲೇ ಕೆಲಸದಲ್ಲಿ ಮುಂದುವರಿದಿದ್ದರೆ ಬಡ್ತಿ, ಉತ್ತಮ ಸಂಬಳ ಸಿಗುತ್ತಿತ್ತು. ಆದರೆ, ತಂದೆಯನ್ನು ನೋಡಿಕೊಳ್ಳುವುದರಲ್ಲಿ ಇರುವ ತೃಪ್ತಿ ಸಿಗುತ್ತಿರಲಿಲ್ಲ. ಈ ನಡುವೆ, ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ಮೇಲೆ ಊರಿನ ಯುವಕರು ಹಾಗೂ ಜನರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿದೆ. ಆಯ್ಕೆಯಾಗಿದ್ದಕ್ಕೆ ಸಂತಸವಾಗಿದೆ’ ಎಂದು ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆ ಕಟ್ಟಿಸಿಕೊಡಬೇಕು

‘ಹಿಂದೆ ಊರಿನಲ್ಲಿ ಅವಿರೋಧ ಆಯ್ಕೆಯೇ ನಡೆದಿದೆ. ಕೆಲವರೇ ಆಯ್ಕೆಯಾಗುತ್ತಿದ್ದರು. ಈ ಬಾರಿ ಚುನಾವಣೆ ಆಗಲೆಂದು ನಾವೆಲ್ಲ ಬಯಸಿದ್ದೆವು. ಆದರೆ, ಯಾರೂ ಮುಂದೆ ಬರಲಿಲ್ಲ. ಕೊನೆಗೆ ತಂದೆ ನನ್ನನ್ನೇ ಸ್ಪರ್ಧಿಸುವಂತೆ ಸಲಹೆ ನೀಡಿದರು. ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದ ನಾನು, ಕಡೆ ಕ್ಷಣದಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದೆ. ಈಗಲೂ ಊರಿನಲ್ಲಿ ಶೆಡ್‌ಗಳಲ್ಲಿ ವಾಸವಿರುವ 40ಕ್ಕೂ ಹೆಚ್ಚು ಕುಟುಂಬದವರು ನನಗೆ ಬೆಂಬಲವಾಗಿ ನಿಂತರು. ‘ನಿಮ್ಮಿಂದಾದಲೂ ನಮಗೆ ಮನೆ ಸಿಗಲಿ’ ಎಂದು ಹಾರೈಸಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಅವರು.

‘ತಂದೆಯ ಒಳ್ಳೆಯ ಗುಣ ನೋಡಿ ಜನರು ನನ್ನನ್ನು ಬೆಂಬಲಿಸಿದ್ದಾರೆ. ಶೆಡ್‌ಗಳಲ್ಲಿ ಇರುವವರಿಗೆ ಆಶ್ರಯ ಯೋಜನೆಗಳಲ್ಲಿ ಮನೆ ಕಟ್ಟಿಸಿಕೊಡುವುದು ನನ್ನ ಪ್ರಥಮ ಆದ್ಯತೆ. ಗ್ರಾಮದಲ್ಲಿ ಬಹಳಷ್ಟು ಯುವಕರು ಸೈನ್ಯಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಅಭ್ಯಾಸ ಮಾಡುವುದಕ್ಕೆ ಅವರಿಗೆ ಮೈದಾನದ ಕೊರತೆ ಇದೆ. ಸದ್ಯ ಅವರು ರಸ್ತೆಯಲ್ಲಿ ಅಭ್ಯಾಸ ಮಾಡುತ್ತಾರೆ. ಇದನ್ನು ತ‍ಪ್ಪಿಸಲು ಗ್ರಾಮದಲ್ಲೊಂದು ಸುಸಜ್ಜಿತ ಮೈದಾನ ನಿರ್ಮಿಸಬೇಕು. ಗ್ರಂಥಾಲಯ ಸ್ಥಾಪಿಸಬೇಕು. ಈ ಮೂಲಕ ಯುವಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸದ್ಯದ ಉದ್ದೇಶವಾಗಿದೆ. ಪಂಚಾಯತ್‌ರಾಜ್‌ ವಿಷಯದ ಬಗ್ಗೆ ಅಭ್ಯಾಸ ಮಾಡಿ, ಅಲ್ಲಿನ ಯೋಜನೆಗಳನ್ನು ತಿಳಿದುಕೊಳ್ಳುತ್ತೇನೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಶ್ರಮಿಸುತ್ತೇನೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು