ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ ತಾಲ್ಲೂಕಿನಲ್ಲಿ ಬರ

ವಾಡಿಕೆಗಿಂತ ಕಡಿಮೆ ಮಳೆ; ಜನ–ಜಾನುವಾರಿಗೆ ಸಂಕಷ್ಟ
Last Updated 4 ಆಗಸ್ಟ್ 2019, 10:39 IST
ಅಕ್ಷರ ಗಾತ್ರ

ರಾಮದುರ್ಗ: ಸತತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಉತ್ತರದ ಕಡೆ ಪ್ರವಾಹ ಉಂಟಾಗಿದೆ.‌ ಆದರೆ, ಜಿಲ್ಲೆಯ ದಕ್ಷಿಣದಲ್ಲಿರುವ ರಾಮದುರ್ಗ ಪಟ್ಟಣ ಮಾತ್ರ ಇನ್ನೂ ಬರಗಾಲದಿಂದ ಮುಕ್ತಿ ಪಡೆದಿಲ್ಲ.

ಜಿಲ್ಲೆಯಲ್ಲಿಯೇ ಒಂದು ಕಡೆ ನೆರೆ ಹಾವಳಿ ಎದುರಾದರೆ, ಇನ್ನೊಂದು ಕಡೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ತಲೆ ದೋರಿದೆ. ಬಿತ್ತಿದ ಬೀಜಗಳು ಮಳೆಯಿಲ್ಲದೇ ಕಮರಿ ಹೋಗುವ ಭೀತಿಯಲ್ಲಿ ರೈತರಿದ್ದಾರೆ. ಮಳೆ ಬರುತ್ತದೆ ಎಂದು ರೈತರು ಆಗಸದ ಕಡೆಗೆ ಮುಖ ಮಾಡಿ ಹಾರಿ ಹೋಗುವ ಮೋಡಗಳನ್ನು ನೋಡುತ್ತಾ ಮರಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಆಗಾಗ ತುಂತುರು ಮಳೆ ಬಿಟ್ಟರೆ, ವಾಡಿಕೆಯಂತೆ ಮಳೆಯಾಗಿಲ್ಲ.

ಇದರಿಂದ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಇನ್ನೂ ನೀಗಿಲ್ಲ. ಪಟ್ಟಣದಲ್ಲಿರುವ ಮಲಪ್ರಭಾ ನದಿ ಸಹ ಬತ್ತಿ ಹೋಗಿ ದನಕರುಗಳಿಗೂ ನೀರಿಲ್ಲದಾಗಿದೆ.

ರಾಮದುರ್ಗ ಮತ್ತು ಸುತ್ತಲಿನ ಗ್ರಾಮಗಳಲ್ಲಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನವೀಲುತೀರ್ಥ ಅಣೆಕಟ್ಟೆಯಿಂದ ನೀರು ಹರಿಸಬೇಕು. ಇದರಿಂದ ಭೂಮಿಯಲ್ಲಿ ಹಾಕಿರುವ ಬೀಜದ ಲಾಭವಾದರೂ ರೈತನ ಕೈಗೆ ಲಭಿಸಲಿ ಎಂದು ಜಿಲ್ಲಾಧಿಕಾರಿಯನ್ನು ಶಾಸಕ ಮಹಾದೇವಪ್ಪ ಯಾದವಾಡ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಯು ಇಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶೀಘ್ರವೇ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಾಡಿಕೆಯಂತೆ ಆಗಸ್ಟ್ ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ 562.05 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಇದುವರೆಗೂ ರಾಮದುರ್ಗ 259 ಮಿ.ಮೀ. ಮಳೆಯಷ್ಟೇ ಆಗಿದೆ.‌ ಇದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅರ್ಧದಷ್ಟು ಮಾತ್ರವೇ ಮಳೆಯಾಗಿದೆ.

ತಾಲ್ಲೂಕಿನ ಕೃಷಿ ಆಧಾರಿತ ಒಟ್ಟು 23,125 ಹೆಕ್ಟೇರ್‌ ಪ್ರದೇಶದಲ್ಲಿ ಕೇವಲ 19,583 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನಾಲೆಗಳಿಂದಲೂ ನೀರು ಲಭ್ಯವಾಗುತ್ತಿಲ್ಲ. ನೀರು ಇಲ್ಲದೇ ಆ ಬೆಳೆಗಳು ಮುದುಡಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಫ್‌. ಬೆಳವಟಗಿ ತಿಳಿಸಿದರು.

ಆಗಾಗ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಕುಡಿಯುವ ನೀರಿನ ಬವಣೆ ಎದುರಿಸಿದ್ದ ಗ್ರಾಮಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಇನ್ನೂ ಕೆಲ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT