ಬುಧವಾರ, ಆಗಸ್ಟ್ 21, 2019
22 °C

ಮನೆಗಳಿಗೆ ನುಗ್ಗಿದ ಮಳೆ ನೀರು.. ಜನರ ಪರದಾಟ

Published:
Updated:
Prajavani

ಬೆಳಗಾವಿ: ನಗರದಲ್ಲಿ ಶುಕ್ರವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಕೆಲವು ದಿನಗಳಿಂದ ಸತತ ಮಳೆ ಸುರಿಯುತ್ತಿರುವ ಕಾರಣದಿಂದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ತೀವ್ರ ಪರದಾಡುತ್ತಿದ್ದಾರೆ. 

ಇಲ್ಲಿನ ಲಕ್ಷ್ಮಿ ಗಲ್ಲಿ, ಸಮರ್ಥ ನಗರ, ಪೀರಣವಾಡಿ, ಕೋನವಾಳ ಗಲ್ಲಿ, ಗಾಂಧಿ ನಗರ, ನಾನಾವಾಡಿ ಕ್ರಾಸ್‌, ಶಿವಾಜಿ ಕಾಲೊನಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಚರಂಡಿಗಳು ತುಂಬಿಹೋಗಿ, ರಸ್ತೆಯ ತುಂಬೆಲ್ಲ ನೀರು ಹರಿದಿದೆ. ಜನರು ರಸ್ತೆ ದಾಟಲು ಹರಸಾಹಸ ಪಟ್ಟರು. ಕೆಲವು ಕಡೆ ಕೆಸರಿನಲ್ಲಿ ಬೈಕ್‌ಗಳು ಸಿಕ್ಕಿಹಾಕಿಕೊಂಡು, ಸವಾರರು ತೀವ್ರ ಕಷ್ಟಪಟ್ಟರು.

‘ಮಳೆಯ ನೀರು ಹರಿದುಹೋಗಲು ಸ್ಥಳಾವಕಾಶ ಸಿಗದೇ ನೀರು ರಸ್ತೆಯ ಮೇಲೆ, ತಗ್ಗಿನ ಪ್ರದೇಶದಲ್ಲಿ ಹಾಗೂ ಮನೆಯೊಳಗೆ ನುಗ್ಗುತ್ತಿದೆ. ಈ ಪ್ರದೇಶದಲ್ಲಿ ಮೊದಲು ಮೂರು ಚರಂಡಿಗಳು ಇದ್ದವು. ಇವುಗಳ ಪೈಕಿ ಎರಡು ಚರಂಡಿಗಳನ್ನು ಕೆಲವು ಪ್ರಭಾವಿಗಳು ಮುಚ್ಚಿಹಾಕಿದ್ದಾರೆ. ಇನ್ನುಳಿದ ಒಂದೇ ಚರಂಡಿಯಲ್ಲಿ ಮೂರೂ ಚರಂಡಿಯ ನೀರು ಹೋಗಲು ಹೇಗೆ ಸಾಧ್ಯ? ನೀರು ಸರಾಗವಾಗಿ ಹರಿಯದೇ ಮನೆಯೊಳಗೆ ನುಗ್ಗುತ್ತಿದೆ’ ಎಂದು ಗಾಂಧಿ ನಗರದ ನಿವಾಸಿ ಮಲ್ಲಪ್ಪ ವಂಟಮೂರಿ ದೂರಿದರು.

‘ನಾವು ಇಲ್ಲಿ 20–30 ವರ್ಷಗಳಿಂದ ವಾಸವಾಗಿದ್ದೇವೆ. ಆದರೆ, ಇತ್ತೀಚೆಗೆ ಅಕ್ಕಪಕ್ಕ ಮನೆಗಳು ಹೆಚ್ಚಾಗಿದ್ದು, ನೀರು ಹರಿಯಲು ಜಾಗ ಇಲ್ಲದಂತಾಗಿದೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕ, ಮಹಾನಗರ ಪಾಲಿಕೆ ಸದಸ್ಯ ಹಾಗೂ ಆಯುಕ್ತರಿಗೂ ಲಿಖಿತ ದೂರು ನೀಡಿದ್ದೆ. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ನೊಂದು ನುಡಿದರು.

ಶಾಸಕರ ಭೇಟಿ:

ಕೊನವಾಳ ಗಲ್ಲಿಯ ಮನೆಯೊಂದರ ಕಂಪೌಂಡ್‌ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಹಾಗೂ ಇತರರು ಭೇಟಿ ನೀಡಿದರು. ಗೋಡೆಯು ಪಕ್ಕದ ನಾಲಾದಲ್ಲಿ ಬಿದ್ದಿದ್ದರಿಂದ ನೀರು ಹರಿಯುವುದಕ್ಕೆ ತೊಂದರೆಯುಂಟಾಗಿತ್ತು. ಸುತ್ತಮುತ್ತಲಿನ ಮನೆಯೊಳಗೆ ನೀರು ನುಗ್ಗುತ್ತಿತ್ತು. ತಕ್ಷಣ ಪಾಲಿಕೆಯ ಸಿಬ್ಬಂದಿ, ನಾಲಾ ತೆರವುಗೊಳಿಸಿ, ನೀರು ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟರು.

‘ನಗರದ ಹಲವೆಡೆ ಅಕ್ರಮ ಬಡಾವಣೆಗಳು ನಿರ್ಮಾಣವಾಗಿವೆ. ಚರಂಡಿ, ರಸ್ತೆಗೆ ಸೂಕ್ತ ಸ್ಥಳಾವಕಾಶ ಬಿಟ್ಟಿರುವುದಿಲ್ಲ. ಮನೆಗಳನ್ನು ತಗ್ಗಿನ ಪ್ರದೇಶದಲ್ಲಿ ನಿರ್ಮಿಸಬಾರದು ಹಾಗೂ ರಸ್ತೆಗಿಂತ ಎತ್ತರದ ಮೇಲೆ ಮನೆಗಳನ್ನು ನಿರ್ಮಿಸಬೇಕು ಎನ್ನುವ ನಿಯಮವಿದ್ದರೂ ಪಾಲಿಸುವುದಿಲ್ಲ. ಹೀಗಾಗಿ ಮಳೆಯ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

 

 

Post Comments (+)