ಶನಿವಾರ, ಮೇ 21, 2022
28 °C

ರಾಜ್ಯೋತ್ಸವ: ಅದ್ಧೂರಿ ಮೆರವಣಿಗೆಗೆ ಪಟ್ಟು, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಗರದಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಅದ್ಧೂರಿ ಮೆರವಣಿಗೆಗೆ ಅವಕಾಶ ಕೊಡಬೇಕು. ನಾಡಿನಲ್ಲೇ ಇದ್ದುಕೊಂಡು ಸರ್ಕಾರದ ವಿರುದ್ಧ ಅವಹೇಳನ ಮಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ‘ಎಂಇಎಸ್‍ನವರು ಕರ್ನಾಟಕದ ವಿರುದ್ಧ ಈವರೆಗೆ ಹಲವು ಬಾರಿ ಅವಹೇಳನ ಮಾಡಿದ್ದಾರೆ. ಹೇಳಿಕೆಗಳನ್ನು ನೀಡಿದ್ದಾರೆ. 40 ವರ್ಷಗಳಿಂದಲೂ ನಾಡವಿರೋಧಿ ಧೋರಣೆ ತಾಳುತ್ತಲೇ ಬಂದಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿಯ ಶಿಕ್ಷೆ ಈವರೆಗೆ ಆಗಿಲ್ಲ. ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ರಾಜ್ಯೋತ್ಸವ ಮೆರವಣಿಗೆಗೆ ನಮಗೆ ಅವಕಾಶ ಕೊಡಲು ಹಿಂದೇಟು ಹಾಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡುವ ಮೂಲಕ ಜನರು ಎಂಇಎಸ್‌ನವರಿಗೆ ಪಾಠ ಕಲಿಸಿದ್ದಾರೆ. ಇದರೊಂದಿಗೆ, ಜನರು ಸರ್ಕಾರಕ್ಕೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ಕನ್ನಡಿಗರ ಏಕೈಕ ನಾಡಹಬ್ಬ ರಾಜ್ಯೋತ್ಸವದಲ್ಲಿ ಅದ್ಧೂರಿ ಮೆರವಣಿಗೆಗೆ ಸರ್ಕಾರ ತಾನಾಗಿಯೇ ಅನುಮತಿ ಕೊಡಬೇಕಿತ್ತು. ನಾವು ಹೋರಾಟದ ಮೂಲಕ ಕೇಳಿ ಪಡೆಯುವಂತೆ ಸನ್ನಿವೇಶ ಸೃಷ್ಟಿಸಿರುವುದು ದುರಾದೃಷ್ಟಕರ’ ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ, ‘ರಾಜ್ಯೋತ್ಸವ ಆಚರಣೆಗೆ ಸರ್ಕಾರದ ಅನುಮತಿ ಬೇಕಿಲ್ಲ. ನಾವೆಲ್ಲರೂ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದೇವೆ. ಕೋವಿಡ್ ಮಾರ್ಗಸೂಚಿ ಪಾಲಿಸಿಯೇ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಗುವುದು’ ಎಂದರು.

ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ವಾಜೀದ ಹಿರೇಕೋಡಿ, ಕಸ್ತೂರಿ ಬಾವಿ, ಮಹಾಂತೇಶ ರಣಗಟ್ಟಿಮಠ, ಬಾಬು ಸಂಗೋಡಿ ಇದ್ದರು.

ಇದಕ್ಕೂ ಮುನ್ನ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ, ನಗರದಲ್ಲಿ ನ.1ರಂದು ಕರ್ನಾಟಕ ರಾಜ್ಯೋತ್ಸವವನ್ನು ಕೋವಿಡ್ ನಿಯಮಾವಳಿಗಳ ಚೌಕಟ್ಟಿನಲ್ಲಿ ಆಚರಿಸಲು ಮುಖಂಡರು ನಿರ್ಧರಿಸಿದರು. ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ಲಸಿಕೆಯ 2 ಡೋಸ್ ಪಡೆದ ಬಗ್ಗೆ  ಪ್ರಮಾಣಪತ್ರದ ಪ್ರತಿಯನ್ನು ಪ್ರದರ್ಶಿಸುವದು ಕಡ್ಡಾಯವೆಂದು ಕಾರ್ಯಕರ್ತರಿಗೆ ತಿಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು