ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ

Last Updated 1 ಏಪ್ರಿಲ್ 2021, 14:58 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವತಿಯ ಪೋಷಕರೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಆರೋಪ ಮಾಡಿದ್ದಾರೆ. ತಂದೆ–ತಾಯಿಯೇ ಹೇಳಿರುವುದರಿಂದ ಅದು ಸತ್ಯವೇ ಇರಬೇಕು. ಹೀಗಾಗಿ, ನೈತಿಕ ಹೊಣೆ ಹೊತ್ತು ಶಿವಕುಮಾರ್‌ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡ ಲಖನ್‌ ಜಾರಕಿಹೊಳಿ ಆಗ್ರಹಿಸಿದರು.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ‘ಶಿವಕುಮಾರ್ ವಿರುದ್ಧದ ಆರೋಪವನ್ನು ಕಾಂಗ್ರೆಸ್ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಬೇಕು. ರಾಜೀನಾಮೆ ಪಡೆದುಕೊಳ್ಳಲೇಬೇಕು. ಆರೋಪ ಕೇಳಿಬಂದ ಕೂಡಲೇ ಸಹೋದರ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದರಂತೆ ಕೆಪಿಸಿಸಿ ಅಧ್ಯಕ್ಷರೂ ನಡೆದುಕೊಳ್ಳಬೇಕು. ಸತ್ಯಾಸತ್ಯತೆಯು ರಾಜ್ಯದ ಜನರಿಗೆ ಗೊತ್ತಾಗಬೇಕು’ ಎಂದರು.

‘ರಮೇಶ ಅವರನ್ನು ಈಚೆಗೆ ಬೆಂಗಳೂರಿನಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದೇನೆ. ಇಂಥವು ಬರ್ತವೆ. ಸಹನೆಯಿಂದ ಇರುವಂತೆ ಹೇಳಿದ್ದೇನೆ’ ಎಂದು ತಿಳಿಸಿದರು.

‘ಸಿ.ಡಿ. ಕಾರ್ಖಾನೆ ಯಾರದು, ನಿರ್ಮಾಪಕರು ಮತ್ತು ನಿರ್ದೇಶಕರು ಯಾರು? ಮಾಡಿಸಿದವರಾರು ಎನ್ನುವುದನ್ನು ಎಲ್ಲ ಪಕ್ಷದವರೂ ಯೋಚಿಸಬೇಕು. ಅಂಥವರೊಂದಿಗೆ ಹುಷಾರಾಗಿ ವೇದಿಕೆ ಹಂಚಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಕಾದಿದೆ’ ಎಂದರು.

‘ರಮೇಶ ದೊಡ್ಡದಾಗಿ ಬೆಳೆಯುತ್ತಿದ್ದುದ್ದನ್ನು ಸಹಿಸದೆ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟದಲ್ಲಿ ಪಾರಾಗಿ ಬಂದೇ ಬರುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

‘ಶತ್ರು ಎಲ್ಲಿ ಎಂದರೆ ಪಕ್ಕದಲ್ಲೇ ಎನ್ನುವಂತಾಗಿದೆ. ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೇ ನೇರ ಪರಿಣಾಮ ಆಗಲಿದೆ. ಯಾರನ್ನು ನಂಬಿ ಯಾರು ಪ್ರಚಾರಕ್ಕೆ ಹೋಗುವುದು? ಡಿಕೆಶಿ ರಾಜೀನಾಮೆ ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಳ್ಳೆಯದಾಗುತ್ತದೆ. ಇಲ್ಲವಾದಲ್ಲಿ, ಪ್ರಚಾರ ಮಾಡಲು ಕಾರ್ಯಕರ್ತರಿಗೆ ಮುಜುಗರ ಆಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT