ಗೋಕಾಕ: ‘ರಾಸು ವಿಮೆ ಯೋಜನೆಯನ್ನು ಕೆಎಂಎಫ್‌ನಿಂದ ಜಾರಿಗೊಳಿಸುವ ಮೂಲಕ ಸಮಸ್ತ ರೈತ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈಚೆಗೆ ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ಒಟ್ಟು ₹ 5.20 ಲಕ್ಷದ ಚೆಕ್ ಅನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
‘ಕೆಎಂಎಫ್'ಗೆ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರ ರೈತರ ಹಸು ಮೃತಪಟ್ಟರೆ ಅದಕ್ಕೆ ₹ 50 ಸಾವಿರ ವಿಮೆ ಸೌಲಭ್ಯ ಜಾರಿ ಮಾಡಲಾಗಿದೆ’ ಎಂದರು.
‘ಹೈನುಗಾರಿಕೆ ಉತ್ತೇಜಿಸಲು ಕೆಎಂಎಫ್‌ನಿಂದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಹಕರಿಗೆ ಹೊರೆಯಾಗದಂತೆ ಈಗಾಗಲೇ ಹಾಲಿನ ಬೆಲೆ ಇಳಿಸಲಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಎಂಎಫ್ ಸಂಸ್ಥೆಯಿಂದ ನೂರಾರು ಬಗೆಯ ಸಿಹಿ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಗಳಲ್ಲಿ ಲಭ್ಯವಿವೆ’ ಎಂದು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಗೋಕಾಕ ವಿಸ್ತರಣಾಧಿಕಾರಿ ಬಿ.ಕೆ.ಜಾಧವ ಮತ್ತು ಮೂಡಲಗಿ ವಿಸ್ತರಣಾಧಿಕಾರಿ ರವಿ ತಳವಾರ ಮುಂತಾದವರು ಇದ್ದರು.