ಗುರುವಾರ , ಜೂನ್ 24, 2021
24 °C
ಸುರಕ್ಷತೆ ಒದಗಿಸಲು ಸಚಿವರ ತವರಲ್ಲೇ ನಿರ್ಲಕ್ಷ್ಯ

ಬೆಳಗಾವಿ: ಅತ್ಯವಶ್ಯ ಸೇವೆ ನೀಡುವವರಿಗಿಲ್ಲ ನೆರವು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕರ್ಫ್ಯೂ ಇರಲಿ ಅಥವಾ ಲಾಕ್‌ಡೌನ್‌ ಜಾರಿಯಲ್ಲಿರಲಿ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಆಹಾರ ಧಾನ್ಯ ವಿತರಣೆ ನಿಲ್ಲಿಸುವಂತಿಲ್ಲ. ಏಕೆಂದರೆ, ಅದನ್ನೇ ನಂಬಿಕೊಂಡು ಸಹಸ್ರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಅಂಥವರಿಗೆ ನೆರವಾಗುತ್ತಿರುವ ನ್ಯಾಯಬೆಲೆ ಅಂಗಡಿಕಾರರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಸೋಂಕಿತ ಭೀತಿಯ ನಡುವೆಯೂ ನ್ಯಾಯಬೆಲೆ ಅಂಗಡಿಯವರು ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಜನರಿಗೆ ನೇರವಾಗಿ ಸಂಪರ್ಕಕ್ಕೆ ಬರುವ ಅವರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಅಥವಾ ಫೇಸ್‌ಶೀಲ್ಡ್‌ಗಳನ್ನು ವಿತರಿಸುವ ಕನಿಷ್ಠ ಕಾಳಜಿಯನ್ನೂ ಇಲಾಖೆ ತೋರಿಲ್ಲ. ಪರಿಣಾಮ, ಅಂಗಡಿಕಾರರು ಆತಂಕದಲ್ಲೇ ಕೆಲಸ ಮಾಡುವಂತಾಗಿದೆ.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರ ತವರಲ್ಲೇ ಅಂಗಡಿಕಾರರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಸಾಧ್ಯತೆ ತಳ್ಳಿ ಹಾಕುವಂತಿಲ್ಲ:

ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದವು ಸೇರಿ 1,728 ನ್ಯಾಯಬೆಲೆ ಅಂಗಡಿಗಳಿವೆ. ಪ್ರತಿಯೊಂದರಲ್ಲೂ ಪರವಾನಗಿ ಪಡೆದವರೊಂದಿಗೆ ಸರಾಸರಿ 2–3 ಮಂದಿ ಕೆಲಸ ಮಾಡುತ್ತಾರೆ. ಅವರೆಲ್ಲರೂ ಸೇರಿದರೆ ಸಾವಿರಾರು ಮಂದಿ ಆಗುತ್ತಾರೆ. ಸಹಸ್ರಾರು ಮಂದಿಗೆ ಅವರು ಪಡಿತರ ವಿತರಿಸಬೇಕಾಗುತ್ತದೆ. ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರೂ ಬಹುತೇಕರು ಪಾಲಿಸುವುದಿಲ್ಲ. ಹೀಗಾಗಿ ನಮಗೂ ಸೋಂಕು ತಗಲುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುವುದು ಅಂಗಡಿಕಾರರ ಆತಂಕವಾಗಿದೆ.

ಅಂತರ ರಾಜ್ಯ ಅಥವಾ ಅಂತರ ಜಿಲ್ಲೆ ಪೋರ್ಟೆಬಿಲಿಟಿ ಜಾರಿ ಇರುವುದರಿಂದ ಯಾವುದೇ ಪಡಿತರ ಚೀಟಿಯವರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅತಿ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ, ಬೆಂಗಳೂರು ಮೊದಲಾದ ಕಡೆಗಳಿಂದ ವಾಪಸಾದವರೂ ಅಂಗಡಿಗಳಿಗೆ ಬರುತ್ತಾರೆ. ಅಂಥವರಿಂದ ಸೋಂಕು ಹರಡಿದರೆ ಹೊಣೆ ಯಾರು ಎನ್ನುವುದು ಅವರ ಪ್ರಶ್ನೆಯಾಗಿದೆ.

‘ನಾವೂ ಕೊರೊನಾ ಮುಂಚೂಣಿ ಯೋಧರಾಗಿ ಕೆಲಸ ಮಾಡುತ್ತಿದ್ದೇವೆ. ಅತ್ಯವಶ್ಯ ಸೇವೆ ಒದಗಿಸುತ್ತಿರುವ ನಮ್ಮನ್ನು ಇಲಾಖೆ ಅಥವಾ ಜಿಲ್ಲಾಡಳಿತದವರು ಪರಿಗಣಿಸಿಲ್ಲ. ಮಾಸ್ಕ್‌, ಸ್ಯಾನಿಟೈಸರ್ ಮೊದಲಾದ ಸುರಕ್ಷತಾ ಸಾಮಗ್ರಿಗಳನ್ನು ಕೂಡ ಕೊಟ್ಟಿಲ್ಲ. ಬಡವರು ಸರ್ಕಾರದಿಂದ ನೀಡುವ ಧಾನ್ಯವನ್ನೇ ನಂಬಿರುವುದರಿಂದ, ಪಡಿತರ ವಿತರಣೆ ನಿಲ್ಲಿಸುವಂತಿಲ್ಲ. ಆದರೂ ನಮಗೆ ನೆರವು ಸಿಗುತ್ತಿಲ್ಲ’ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.

ಲಸಿಕೆಯನ್ನೂ ಕೊಟ್ಟಿಲ್ಲ:

‘ನ್ಯಾಯಬೆಲೆ ಅಂಗಡಿಕಾರರು ಹಾಗೂ ಕುಟುಂಬದವರಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ನೀಡಬೇಕು ಎಂದು ಸರ್ಕಾರದಿಂದ ಆದೇಶವಾಗಿದೆ. ಆದರೆ, ಇಂದಿಗೂ ಜಿಲ್ಲಾಡಳಿತ ಅತ್ತ ಗಮನವನ್ನೇ ಕೊಟ್ಟಿಲ್ಲ. ಕೋವಿಡ್‌ ಸೋಂಕಿತರು ಅಥವಾ ಶಂಕಿತರಾಗಿ ಜಿಲ್ಲೆಯಲ್ಲಿ 30 ಮಂದಿ ಅಂಗಡಿಕಾರರು ಸಾವಿಗೀಡಾಗಿದ್ದಾರೆ. ಅವರ ಕುಟುಂಬದವರಿಗೆ ₹ 2 ಲಕ್ಷ ಪರಿಹಾರದ ಭರವಸೆ ಸಿಕ್ಕಿತ್ತು. ಈ ಬಗ್ಗೆಯೂ ಸರ್ಕಾರ ಗಮನಹರಿಸಿಲ್ಲ’ ಎಂದು ತಿಳಿಸಿದರು.

‘ಬಯೊಮೆಟ್ರಿಕ್‌ ಪದ್ಧತಿ ಜಾರಿಯಲ್ಲಿದೆ. ಪಡಿತರಕ್ಕಾಗಿ ಗ್ರಾಹಕರು ಬೆರಳಚ್ಚು ನೀಡಬೇಕು. ಅದರ ಮೇಲೆ ನಾವೂ ಒತ್ತಬೇಕು. ಸೋಂಕು ಇದ್ದವರು ಬಯೊಮೆಟ್ರಿಕ್ ಯಂತ್ರ ಬಳಸಿದರೆ ಕೆಲಸ ಮಾಡುವವರಿಗೂ ತಗುಲುವ ಸಾಧ್ಯತೆ ಹೆಚ್ಚು. ಕೋವಿಡ್ 1ನೇ ಅಲೆಯಲ್ಲಿ ಮೊಬೈಲ್ ಫೋನ್‌ ಒಟಿಪಿ ಮೂಲಕ ವಿತರಣೆ ಪದ್ಧತಿಯನ್ನು ಸರ್ಕಾರ ಜಾರಿಗೊಳಿಸಿತ್ತು. ಈ ಬಾರಿಯೂ ಅದನ್ನು ಅನುಷ್ಠಾನಗೊಳಿಸಿದರೆ ಅನುಕೂಲ ಆಗುತ್ತದೆ’ ಎನ್ನುವ ಆಗ್ರಹ ಅವರದು.

***

ಲಸಿಕೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ
ರಾಜಶೇಖರ ತಳವಾರ
ಉಪಾಧ್ಯಕ್ಷರು, ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ

***

ಅಂಕಿ–ಅಂಶ

14.12 ಲಕ್ಷ

ಜಿಲ್ಲೆಯಲ್ಲಿ ನೀಡಲಾಗಿರುವ ಪಡಿತರ ಚೀಟಿಗಳ ಸಂಖ್ಯೆ

44,155

ಅಂತ್ಯೋದಯ ಚೀಟಿ

10.77 ಲಕ್ಷ

ಬಿಪಿಎಲ್‌ ಚೀಟಿ

2.90 ಲಕ್ಷ

ಎಪಿಎಲ್‌ ಚೀಟಿ

11.21 ಲಕ್ಷ

ಪಡಿತರ ಪಡೆಯುತ್ತಿರುವ ಚೀಟಿಗಳ ಸಂಖ್ಯೆ (ಸರಾಸರಿ)

1,728

ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು