ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ–2020: ಆರ್‌ಸಿಯುನಲ್ಲಿ ಈ ಸಾಲಿನಿಂದಲೇ ಜಾರಿ

ರಾಷ್ಟ್ರೀಯ ಶಿಕ್ಷಣ ನೀತಿ–2020 ಅನುಷ್ಠಾನಕ್ಕೆ ಕ್ರಮ
Last Updated 24 ಆಗಸ್ಟ್ 2021, 13:06 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ರಾಷ್ಟ್ರೀಯ ಶಿಕ್ಷಣ ನೀತಿ–2020ನ್ನು ಪ್ರಸಕ್ತ ವರ್ಷದಿಂದ ಅಂದರೆ 2021–22ನೇ ಸಾಲಿನಿಂದ ಪದವಿಯ ಮೊದಲ ವರ್ಷದಿಂದ ಅನುಷ್ಠಾನಗೊಳಿಸಲಾಗಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.

‘ವಿದ್ಯಾವಿಷಯಕ ಮಂಡಳಿ ಹಾಗೂ ಸಿಂಡಿಕೇಟ್ ಸಭೆಯ ಅನುಮೋದನೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಕ್ಕೆ ಆದೇಶಿಸಲಾಗಿದೆ. ಅವಶ್ಯವಿರುವ ನಿಯಮಾವಳಿಗಳು ಮತ್ತು ಪಠ್ಯಕ್ರಮಗಳನ್ನು ಆದಷ್ಟು ಶೀಘ್ರದಲ್ಲಿ ಅಧಿಸೂಚಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ವಿಶ್ವವಿದ್ಯಾಲಯದ ಸಂಯೋಜಿತ 398 ಮಹಾವಿದ್ಯಾಲಯಗಳಲ್ಲೂ ಏಕಕಾಲಕ್ಕೆ ಜಾರಿಗೆ ತಂದಿದ್ದು, ಯುಯುಸಿಎಂಎಸ್ ತಂತ್ರಾಂಶದ ಮೂಲಕ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲ ವರ್ಷದ ಪಠ್ಯಕ್ರಮದ ಮಾದರಿಗಳನ್ನು ಒದಗಿಸಲಾಗಿದೆ. ಅ.4ರಿಂದ ತರಗತಿಗಳು ಆರಂಭಗೊಳ್ಳಲಿದ್ದು, ಅಲ್ಲಿಯವರೆಗೆ ಎಲ್ಲ ವಿಷಯಗಳ ಪಠ್ಯಕ್ರಮಗಳೂ ಸಿದ್ಧವಾಗಲಿವೆ’ ಎಂದು ಸ್ಪಷ್ಟಪಡಿಸಿದರು.

ಮಾನವ ಸಂಪನ್ಮೂಲ ನೀಡಲು:

‘ಕೇಂದ್ರ ಸರ್ಕಾರವು 34 ವರ್ಷದ ನಂತರ ನೀತಿ ರೂಪಿಸಿದೆ. ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಆರ್ಥಿಕವಾಗಿ ಮುಂದಿನ ಪೀಳಿಗೆಯನ್ನು ಎಲ್ಲ ರೀತಿಯಿಂದಲೂ ಸಜ್ಜುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣವು ಮಹತ್ವದ್ದಾಗಿದೆ. ಔದ್ಯೋಗಿಕ ಮಾರುಕಟ್ಟೆಗೆ ತಕ್ಕಂತೆ ಮಾನವ ಸಂಪನ್ಮೂಲ ಸಿದ್ಧಪಡಿಸಲು ಶೈಕ್ಷಣಿಕ ಉಪಕ್ರಮಗಳನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಾಗಿದೆ. ಜ್ಞಾನ, ಉದ್ಯೋಗ ಮತ್ತು ಕೌಶಲ ಎಂಬ ಮೂರಂಶಗಳನ್ನು ಇಟ್ಟುಕೊಂಡು ವಿದ್ಯಾರ್ಥಿಕೇಂದ್ರಿತ ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಭೂಮಿಕೆಯನ್ನು ನೀತಿಯು ನಿರ್ಮಿಸಿದೆ’ ಎಂದು ಹೇಳಿದರು.

‘ಪ್ರಸಕ್ತ ವರ್ಷ ವಿದ್ಯಾರ್ಥಿಗಳು ಬಿ.ಎ. ಅಥವಾ ಬಿ.ಎಸ್ಸಿ. ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ 3ನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿಯೂ ಇನ್ನೊಂದನ್ನು ಮೈನರ್‌ ವಿಷಯವನ್ನಾಗಿಯೂ ಅಥವಾ ಎರಡು ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ’.

ವರ್ಷ ಪೂರೈಸಿದರೆ ಪ್ರಮಾಣಪತ್ರ:

‘ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ 2 ವಿಷಯಗಳ ಜೊತೆಗೆ ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯಗಳನ್ನು ಮತ್ತು ಪ್ರೋಗ್ರಾಮ್ ವಿನ್ಯಾಸಕ್ಕೆ ಅನುಗುಣವಾಗಿ ಆಯ್ದುಕೊಳ್ಳಬಹುದು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃಭಾಷೆ ಅಲ್ಲದವರಿಗೆ ಬೇರೆ ಕನ್ನಡ ಪಠ್ಯಕ್ರಮ ರೂಪಿಸಿ ಬೋಧಿಸತಕ್ಕದ್ದು ಎಂದು ಸೂಚಿಸಲಾಗಿದೆ’ ಎಂದರು.

‘ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ನಿಗದಿತ ಪಠ್ಯಕ್ರಮವನ್ನು ಅಧ್ಯಯನ ಮಾಡಿ, ಅಗತ್ಯ ಕ್ರೆಡಿಟ್ (ಅಂಕ)ಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣಪತ್ರ ಕೊಡಲಾಗುವುದು. 2ನೇ ವರ್ಷದ ಅಧ್ಯಯನ ಮುಂದುವರಿಸಿ ಅವಶ್ಯ ಅಂಕಗಳನ್ನು ಗಳಿಸಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಡಿಪ್ಲೊಮಾ ನೀಡಲಾಗುವುದು. 3ನೇ ವರ್ಷದಿಂದ ನಿರ್ಗಮಿಸಿದರೆ ಸ್ನಾತಕ ಪದವಿ ಸಿಗಲಿದೆ. 4 ವರ್ಷ ಪೂರ್ಣಗೊಳಿಸಿದವರಿಗೆ ಸ್ನಾತಕ ಹಾನರ್ಸ್‌ ಪದವಿ ಕೊಡಲಾಗುವುದು. ಅವರು ನೇರವಾಗಿ ‍‍ಪಿಎಚ್‌.ಡಿ. ಮಾಡಬಹುದು. 3 ವರ್ಷ ಮುಗಿಸಿದವರು ಸ್ನಾತಕೋತ್ತರ ಪದವಿಯ ಮೊದಲನೇ ವರ್ಷಕ್ಕೆ ಸೇರಬಹುದು’ ಎಂದು ವಿವರಿಸಿದರು.

‘4 ವರ್ಷದ ಹಾನರ್ಸ್‌ ಪೂರ್ಣಗೊಳಿಸಿದವರು ಸ್ನಾತಕೋತ್ತರ ಪದವಿ ಗಳಿಸಲು ಬಯಸಿದರೆ 2ನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ. 4ನೇ ವರ್ಷದಲ್ಲಿ ಸಂಶೋಧನೆ ಆಧರಿತ ಅಂಶಗಳಿಗೆ ಒತ್ತು ನೀಡಲಾಗುವುದು’ ಎಂದರು.

ಕುಲಸಚಿವರಾದ ಪ್ರೊ.ಎಸ್.ಎಂ. ಹುರಕಡ್ಲಿ, ಪ್ರೊ.ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿ ಡಾ.ಡಿ.ಎನ್. ಪಾಟೀಲ, ಸಂಗೊಳ್ಳಿರಾಯಣ್ಣ ಘಟಕ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಜಯಪ್ಪ ಇದ್ದರು.

ಬೇರೆ ಕಾಲೇಜು ಸೇರಬಹುದು

‘ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ 4ನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನವನ್ನು ಮುಂದುವರಿಸಿ ಅವಶ್ಯ ಅಂಕಗಳನ್ನು ಗಳಿಸಿ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್‌ ಪದವಿ ದೊರೆಯಲಿದೆ. ಸ್ನಾತಕ ಹಾನರ್ಸ್‌ ಪದವಿಯು ಲಭ್ಯವಿಲ್ಲದಿದ್ದಲ್ಲಿ ವಿದ್ಯಾರ್ಥಿಯು ಬೇರೊಂದು ಕಾಲೇಜು ಸೇರಬಹುದು. ಕಾಲೇಜುಗಳು 4ನೇ ವರ್ಷದ ಸ್ನಾತಕ ಹಾನರ್ಸ್‌ ಪದವಿ ತರಗತಿಗಳನ್ನು ನಡೆಸಲೇಬೇಕೆಂಬ ಕಡ್ಡಾಯವಿಲ್ಲ. ವಿದ್ಯಾರ್ಥಿಗಳು ಯಾವ ಹಂತದಲ್ಲಿ ಅಧ್ಯಯನ ನಿಲ್ಲಿಸಿದ್ದಾರೆಯೋ ಅಲ್ಲಿಂದಲೇ ಮುಂದುವರಿಸಲು ಅವಕಾಶವಿದೆ’ ಎಂದು ಕುಲಪತಿ ತಿಳಿಸಿದರು.

‘ವಿದ್ಯಾರ್ಥಿಗಳು ಯಾವುದೇ ಹಂತದಲ್ಲಿ ಗಳಿಸಬೇಕಾದ ಕ್ರೆಡಿಟ್‌ಗಳ ಗರಿಷ್ಠ ಶೇ 40ರಷ್ಟನ್ನು ಅಧಿಕೃತ ಆನ್‌ಲೈನ್‌ ಕೋರ್ಸ್‌ಗಳ ಮೂಲಕ ಗಳಿಸಿ ತನ್ನ ಶೈಕ್ಷಣಿಕ ಖಾತೆಯಲ್ಲಿ ಜಮಾ ಮಾಡಿಕೊಳ್ಳಬಹುದು’ ಎಂದರು.

ತಿಂಗಳೊಳಗೆ ಚಾಲನೆ

ಹಿರೇಬಾಗೇವಾಡಿ ಬಳಿ ದೊರೆತಿರುವ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ₹ 110 ಕೋಟಿ ಲಭ್ಯ ಇದೆ. ಅದನ್ನು ಬಳಸಿಕೊಂಡು ತಿಂಗಳೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು.

–ಪ್ರೊ.ಎಂ. ರಾಮಚಂದ್ರಗೌಡ, ಕುಲಪತಿ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT