ಗುರುವಾರ , ಸೆಪ್ಟೆಂಬರ್ 23, 2021
23 °C
ಸರ, ನಗದು ಕಸಿದು ಪರಾರಿ

ಬೆಳಗಾವಿ: ರಿಯಲ್‌ ಎಸ್ಟೇಟ್ ಉದ್ಯಮಿ ಅಪಹರಿಸಿ, ಕೆಲವೇ ಗಂಟೆಗಳಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿ ಮದನಕುಮಾರ ಭೈರಪ್ಪನವರ ಎನ್ನುವವರನ್ನು ಶನಿವಾರ ಅಪಹರಿಸಿದ ತಂಡವೊಂದು, ಕೆಲವು ಬಾಂಡ್‌ಪೇಪರ್‌ಗಳ ಮೇಲೆ ಸಹಿ ಪಡೆದು, ಬಂಗಾರದ ಸರ, ₹25 ಸಾವಿರ ಕಸಿದುಕೊಂಡು ನಾಲ್ಕೈದು ತಾಸುಗಳ ಬಳಿಕ ಬಿಟ್ಟು ಹೋದ ಘಟನೆ ಶನಿವಾರ ನಡೆದಿದೆ.

ಕಣಬರ್ಗಿಯ ನಿವಾಸಿ ಮದನಕುಮಾರ ಅವರ ಮೇಲೆ ಹಲ್ಲೆ ನಡೆದಿದೆ. ಅವರನ್ನು ಅಪಹರಣಕಾರರು ತಾಲ್ಲೂಕಿನ ಬೆನಕನಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಣಾಪಾಯವಿಲ್ಲದೆ ವಾಪಸಾದ್ದರಿಂದಾಗಿ ಕುಟುಂಬದವರು ನಿಟ್ಟಿಸಿರು ಬಿಟ್ಟಿದ್ದಾರೆ.

‘ಬೆಳಗ್ಗೆ ಕಚೇರಿಗೆ ಹೊರಟಿದ್ದಾಗ ಕಾಕತಿ ಬಳಿಯ ಇಂಡಾಲ್ಕೋ ಎದುರು ಮದನಕುಮಾರ ಅವರ ಕಾರಿಗೆ ಹಿಂದಿನಿಂದ ಕಾರೊಂದು ಗುದ್ದಿದೆ. ಕೆಳಗಿಳಿದು ವಿಚಾರಿಸಲು ಮುಂದಾದಾಗ, ಅಪಹರಣಕಾರರು ಬಲವಂತವಾಗಿ ತಮ್ಮ ಕಾರ್‌ಗೆ ಹತ್ತಿಸಿಕೊಂಡು ಹೋಗಿದ್ದಾರೆ. ದೂರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಿಂದಿಸಿದ್ದಾರೆ’ ಎಂದು ದೂರಲಾಗಿದೆ. ‘ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆಯೂ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಧ್ಯಾಹ್ನ 3.30ರ ವೇಳೆಗೆ  ಬೆನಕನಹಳ್ಳಿ ಬಳಿ ಬಿಟ್ಟು ಹೋಗಿದ್ದಾರೆ. ಮದನಕುಮಾರ ಟ್ಯಾಕ್ಸಿ ಮಾಡಿಕೊಂಡು ನಗರ ಬಂದಿದ್ದಾರೆ’ ಎಂದು ಗೊತ್ತಾಗಿದೆ.

ಅಪಹರಣ ಮಾಡಲಾಗಿದೆ ಎಂದು ಕುಟುಂಬದವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ ದೂರು ನೀಡಿದ್ದರು.

‘ಮಾಳಮಾರುತಿ ಠಾಣೆ ಪೊಲೀಸರು ಮದನಕುಮಾರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ತಂದೆಯನ್ನು ಯಾರೋ ಅಪಹರಿಸಿದ್ದಾರೆ. ಅವರು ದೇವಸ್ಥಾನಕ್ಕೆ ಹೋಗುವಾಗ ತಡೆದು ಎಳೆದೊಯ್ದಿದ್ದಾರೆ. ಕಾರಿನ ಬಳಿ ಅವರ ಶೂ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದ್ದೇವೆ’ ಎಂದು ಕುಟುಂಬದವರು ಮಾಧ್ಯಮ ಪ್ರತಿನಿಧಿಗಳಿಗೆ ಬೆಳಿಗ್ಗೆ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು