ಸೋಮವಾರ, ಮೇ 25, 2020
27 °C
ಸ್ವತಂತ್ರ ಧರ್ಮಕ್ಕಾಗಿ ಬೃಹತ್‌ ಸಮಾವೇಶ ನಡೆದಿದ್ದ ನೆಲವಿದು

ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ತಿರಸ್ಕೃತ: ವಿರೋಧ, ಸ್ವಾಗತ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದಕ್ಕೆ ಜಿಲ್ಲೆಯಲ್ಲಿ ವಿರೋಧ ಹಾಗೂ ಪರವಾದ ಅಭಿ‍ಪ್ರಾಯಗಳು ವ್ಯಕ್ತವಾಗಿವೆ.

ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹೋರಾಡಿದ್ದವರು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ’ ಎಂದು ವಾದಿಸಿದ್ದವರು ಕೇಂದ್ರದ ನಿಲುವನ್ನು ಸ್ವಾಗತಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯಬೇಕು ಎಂದು ರಾಜ್ಯದಾದ್ಯಂತ ಹೋರಾಟ ನಡೆದಿತ್ತು. ಬೀದರ್‌ ನಂತರ 2ನೇ ಬೃಹತ್‌ ಸಮಾವೇಶ ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ ನಡೆದಿತ್ತು. ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಇಲ್ಲಿನ ಸಮಾವೇಶ ಪ್ರಮುಖ ಪಾತ್ರ ವಹಿಸಿತ್ತು. ಮಠಾಧೀಶರು ಒಕ್ಕೊರಲ ನಿರ್ಣಯ ಮಂಡಿಸಿ, ಪ್ರತ್ಯೇಕ ಧರ್ಮದ ಮಹತ್ವವನ್ನು ಪ್ರತಿಪಾದಿಸಿದ್ದರು. ಹೋರಾಟದ ನೇತೃತ್ವ ವಹಿಸಿದ್ದವರಲ್ಲಿ ಒಬ್ಬರಾದ ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ಹಲವು ಹೋರಾಟಗಳಿಗೆ ಇಲ್ಲಿಂದಲೇ ಕರೆ ಕೊಟ್ಟಿದ್ದರು; ಹಲವು ಜಾಗೃತಿ ಸಮಾವೇಶಗಳನ್ನೂ ನಡೆಸಿದ್ದರು. ಅಂತೆಯೇ, ವೀರಶೈವ ಮಹಾಸಭಾದಿಂದಲೂ ಕಾರ್ಯಕ್ರಮಗಳು ನಡೆದಿದ್ದವು. ವೀರಶೈವ–ಲಿಂಗಾಯತ ಬೇರೆ ಬೇರೆಯಲ್ಲ; ಎಲ್ಲವೂ ಒಂದೇ ಎಂದು ವಾದಿಸಿದ್ದರು.

ಘಟಕವನ್ನೇ ವಿಸರ್ಜಿಸಲಾಗಿದೆ

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕವನ್ನು ವಿಸರ್ಜಿಸಿ ‘ಅಖಿಲ ಭಾರತ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ’ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಇಲ್ಲಿನ ಮುಖಂಡರು ಕೈಗೊಂಡಿದ್ದು ಕೂಡ ವಿಶೇಷ. ಮುಖಂಡ ಶಂಕರಣ್ಣ ವಿಜಾಪುರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ, ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಬರಲು ಇಲ್ಲಿನ ‘ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವವರು’ ಕೈಗೊಂಡ ನಿರ್ಣಯವೇ ಕಾರಣವಾಗಿತ್ತು. ಇದು ಇತರ ಜಿಲ್ಲೆಗಳಿಗೆ ಮೇಲ್ಪಂಕ್ತಿಯೂ ಆಗಿತ್ತು. ಇದನ್ನು ಸ್ಫೂರ್ತಿಯಾಗಿಟ್ಟುಕೊಂಡು ಹಲವು ಜಿಲ್ಲೆಗಳಲ್ಲೂ ಇಂಥ ಪ್ರಯತ್ನಗಳು ನಡೆದಿದ್ದವು.

ಈಗ ಇಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳು ಸಕ್ರಿಯವಾಗಿವೆ.

ಸಮಿತಿಯಲ್ಲಿ ಇಬ್ಬರು ಸದಸ್ಯರು

ವೀರಶೈವ ಹಾಗೂ ಲಿಂಗಾಯತ ಸಮುದಾಯಗಳ ನಡುವಿನ ಧರ್ಮ ಸಂಘರ್ಷ ಬಗೆಹರಿಸುವ ನಿಟ್ಟಿನಲ್ಲಿ, ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ತಜ್ಞರ ಸಮಿತಿಯಲ್ಲಿ ಇಲ್ಲಿನ ಇಬ್ಬರು ಸದಸ್ಯರಾಗಿದ್ದರು. ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ ರಾಮಕೃಷ್ಣ ಮರಾಠೆ ಹಾಗೂ ಸರಜೂ ಕಾಟ್ಕರ್ ಇಲ್ಲಿಯವರು. ಅವರನ್ನು ಒಳಗೊಂಡ ಸಮಿತಿಯು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಆಧಾರದ ಮೇಲೆಯೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

‘ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಎಲ್ಲ ರೀತಿಯ ಅರ್ಹತೆ ಹೊಂದಿದೆ; ಅದು ಹಿಂದೂ ಧರ್ಮದ ಭಾಗವಲ್ಲ ಎಂದು ವರದಿಯಲ್ಲಿ ತಿಳಿಸಿದ್ದೇವೆ. ಅದಕ್ಕೆ ಕಾರಣಗಳನ್ನೂ ಕೊಟ್ಟಿದ್ದೇವೆ. ವೈಜ್ಞಾನಿಕ ವರದಿ ಸಲ್ಲಿಸಿದ್ದೇವೆ. ಅದನ್ನು ರಾಜ್ಯ ಒಪ್ಪಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು’ ಎಂದು ಸಮಿತಿ ಸದಸ್ಯರಾಗಿದ್ದ ಸರಜೂ ಕಾಟ್ಕರ್‌ ಪ್ರತಿಕ್ರಿಯಿಸಿದರು.

ಈಚೆಗೆ ಇಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ್ದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಹೇಗೆ ಬಂತೋ ಹಾಗೆಯೇ ಹೋಯಿತು’ ಎಂಬ ಹೇಳಿಕೆಯ ಕೂಡ ಚರ್ಚೆಗೆ ಗ್ರಾಸ ಒದಗಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು