ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ವಿನಿಮಯ ಒಪ್ಪಂದ ಪ್ರಸ್ತಾವ ತಿರಸ್ಕರಿಸಿ

ಸರ್ಕಾರಕ್ಕೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪತ್ರ
Last Updated 1 ಮೇ 2019, 12:43 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕರ್ನಾಟಕ್ಕೆ ನೀರು ಬಿಡುವ ಸಂಬಂಧ ತುರ್ತಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಮಹಾರಾಷ್ಟ್ರದ ನೀರು ವಿನಿಮಯ ಒಪ್ಪಂದದ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಕೃಷ್ಣಾ ನದಿಯು ಬತ್ತಿದ ಪರಿಣಾಮ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನೂರಾರು ನಗರ ಹಾಗೂ ಗ್ರಾಮಗಳ ಜನರು ಕುಡಿಯುವ ನೀರಿಗೆ ತೀವ್ರ ಅಭಾವ ಎದುರಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ಒತ್ತಡ ತಂದರೂ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡುತ್ತಿಲ್ಲ. ಮಾರ್ಚ್‌ 20ರಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಮಾನವೀಯತೆ ದೃಷ್ಟಿಯಿಂದ ನೀರು ಬಿಡುಗಡೆಗೆ ಕೋರಿದ್ದಾರೆ. ಹಲವು ಮಂದಿ ಮನವಿ ಮಾಡಿದರೂ ಅಲ್ಲಿನ ಮುಖ್ಯಮಂತ್ರಿ ಸ್ಪಂದನೆ ತೋರುತ್ತಿಲ್ಲ. ನೀರು ಬಿಡುಗಡೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿಲ್ಲ’. ‌

‘ನಮಗೆ ದೊರೆತ ಮಾಹಿತಿ ಪ್ರಕಾರ ಮಹಾರಾಷ್ಟ್ರವು ಕರ್ನಾಟಕ ಜೊತೆಗೆ ನೀರು ವಿನಮಯ ಒಪ್ಪಂದಕ್ಕೆ ಪಟ್ಟು ಹಿಡಿದಿದೆ. ತಾನು ಬಿಡುಗಡೆ ಮಾಡುವ ನೀರಿಗೆ ‍ಪ್ರತಿಯಾಗಿ ವಿಜಯಪುರ ಜಿಲ್ಲೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಸಾಂಗ್ಲಿ ಜಿಲ್ಲೆಗೆ ನೀರು ಬಿಡುಗಡೆ ಮಾಡಬೇಕೆಂದು, ಆ ಸರ್ಕಾರದ ಸೂಚನೆ ಮೇರೆಗೆ ಅಲ್ಲಿನ ನೀರಾವರಿ ಅಧಿಕಾರಿಗಳು ನಮ್ಮ ರಾಜ್ಯದ ಜಲಸಂ‍ಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಪ್ರಾಸ್ತಾವ ಕಳುಹಿಸಿದ್ದಾರೆ. ಈ ಸಂಬಂಧ ಕಳೆದ ತಿಂಗಳು ಪುಣೆಯಲ್ಲಿ ನಡೆದ ಉಭಯ ರಾಜ್ಯಗಳ ಅಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದೆ’.

‘ಇಂಥ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದಲ್ಲಿ ರಾಜ್ಯದ ಹಿತಾಸಕ್ತಿಗೆ ಮುಂಬರುವ ದಿನಗಳಲ್ಲಿ ತೀವ್ರ ಧಕ್ಕೆಯಾಗಲಿದೆ. ನೀರಿಗೆ ನೀರು ತತ್ವ ಆಧರಿಸಿ ಒಪ್ಪಂದ ಮಾಡಿಕೊಳ್ಳಬೇಕೆಂಬ ಮಹಾರಾಷ್ಟ್ರದ ವಾದವು ಕುತಂತ್ರದಿಂದ ಕೂಡಿದೆ. ಹೀಗಾಗಿ, ಇದನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಕೋಯ್ನಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು ಮಳೆಗಾಲದ ಮುನ್ನವೇ ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡಲೇಬೇಕಾಗುತ್ತದೆ. ಹೀಗಿದ್ದರೂ ಹಟಮಾರಿತನದ ಧೋರಣೆ ಅನುಸರಿಸುತ್ತಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ.

‘ಮಹಾರಾಷ್ಟ್ರವು ನೀರು ಕೇಳುತ್ತಿರುವ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ ಆಲಮಟ್ಟಿ ಯೋಜನೆಯಿಂದ 6.5 ಟಿ.ಎಂ.ಸಿ. ನೀರು ಹಂಚಿಕೆಯಾಗಿದೆ. ಈ ನೀರಿನಿಂದ 52ಸಾವಿರ ಹೆಕ್ಟೇರ್‌ ಜಮೀನು ನೀರಾವರಿಗೆ ಒಳಪಡಲಿದೆ. ಒಂದು ವೇಳೆ ಸಾಂಗ್ಲಿ ಜಿಲ್ಲೆಯ ಜತ್ತ ಮತ್ತು ಇತರ ಪ್ರದೇಶಗಳಿಗೆ ನೀರು ಪೂರೈಸಬೇಕಾದರೆ ತಿಕೋಟಾ ನೀರು ವಿತರಣಾ ಕೇಂದ್ರದಿಂದ 20 ಕಿ.ಮೀ. ಕೊಳವೆ ಮಾರ್ಗ ಹಾಕಬೇಕಾಗುತ್ತದೆ. ಅಲ್ಲದೇ 6.5 ಟಿ.ಎಂ.ಸಿ. ನೀರು ಹಂಚಿಕೆ ಕಾರ್ಯಕ್ರಮ ಕಡಿತಗೊಳಿಸಬೇಕಾಗುತ್ತದೆ. ಹೀಗಾಗಿ, ಈ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಶೀಲಿಸಬೇಕು. ಅಲ್ಲಿನ ಮುಖ್ಯಮಂತ್ರಿ ಜೊತೆ ಕೂಡಲೇ ಮಾತುಕತೆ ನಡೆಸಬೇಕು. ಚುನಾವಣೆ ಫಲಿತಾಂಶದವರಗೆ ಕಾಯದೇ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರು ಕಲ್ಪಿಸಲು ಕ್ರಮ ವಹಿಸಬೇಕು. ತುರ್ತಾಗಿ ಸರ್ವಪಕ್ಷ ಸಭೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT