ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ನಿವೃತ್ತ ಜವಾನ್‌ ಈಗ ಯಶಸ್ವಿ ಕಿಸಾನ್‌

ಸಾವಯವ ಕೃಷಿಯಿಂದ ಉತ್ತಮ ಆದಾಯ ಪಡೆದ ಯರಡಾಲದ ರೈತ ಶಿವಾನಂದ ಸಿದ್ನಾಳ
Published 18 ಆಗಸ್ಟ್ 2023, 4:21 IST
Last Updated 18 ಆಗಸ್ಟ್ 2023, 4:21 IST
ಅಕ್ಷರ ಗಾತ್ರ

ಇಮಾಮ್‌ ಹುಸೇನ್‌ ಗೂಡುನವರ

ಯರಡಾಲ (ಬೆಳಗಾವಿ ಜಿಲ್ಲೆ): ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮೇಲೆ ಬಹಳ ಜನ ಇನ್ನೊಂದು ನೌಕರಿಗೆ ತಡಕಾಡುತ್ತಾರೆ. ಅಲ್ಲಿಂದ ಹೊಸ ಜೀವನ ಕಟ್ಟಿಕೊಳ್ಳುವ ಧಾವಂತ ಆರಂಭವಾಗುತ್ತದೆ. ಆದರೆ, ಇಲ್ಲೊಬ್ಬ ನಿವೃತ್ತ ಯೋಧ ಇದ್ದಾರೆ. ಸೇನಾನಿವೃತ್ತಿ ಬಳಿಕ ಅವರು ನೇರವಾಗಿ ತಮ್ಮ ಹೊಲಕ್ಕೆ ಕಾಲಿಟ್ಟರು. ಜೈ ಜವಾನ್‌– ಜೈ ಕಿಸಾನ್‌ ಎರಡಕ್ಕೂ ಮಾದರಿಯಾದರು.

ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಯರಡಾಲದ ರೈತ ಶಿವಾನಂದ ಷಣ್ಮುಖಪ್ಪ ಸಿದ್ನಾಳ ಈ ಸಾಧನೆ ಮಾಡಿದ ರೈತ. ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅವರು, ಕಳೆದ 13 ವರ್ಷಗಳಿಂದ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಸಾವಯವ ಕೃಷಿಗೆ ಆದ್ಯತೆ ನೀಡಿದ್ದು ಗಮನಾರ್ಹ.

‘ಈ ಹಿಂದೆ ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದೆ. ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚಾಯಿತು. ಭೂಮಿಯ ಫಲವತ್ತತೆ ಕಡಿಮೆಯಾಯಿತು. ಹಾಗಾಗಿ ಆರು ವರ್ಷಗಳ ಹಿಂದೆ ಸಾವಯವ ಕೃಷಿಯತ್ತ ಹೊರಳಿದೆ. ಈಗ ಅದರಲ್ಲೇ ಖುಷಿ ಕಂಡಿದ್ದು, ಉತ್ತಮ ಆದಾಯವನ್ನೂ ಗಳಿಸುತ್ತಿದ್ದೇನೆ...’ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ.

ಏನೇನು ಬೆಳೆದಿದ್ದಾರೆ?: 5 ಎಕರೆ, 30 ಗುಂಟೆ ಜಮೀನು ಹೊಂದಿರುವ ಶಿವಾನಂದ ಮುಂಗಾರು ಹಂಗಾಮಿನಲ್ಲಿ ತಲಾ ಒಂದು ಎಕರೆಯಲ್ಲಿ ರೇಷ್ಮೆ, ಕಬ್ಬು ಬೆಳೆದಿದ್ದಾರೆ. ಉಳಿದ ಭೂಮಿಯಲ್ಲಿ ಸೋಯಾಬೀನ್‌ ಬೆಳೆಯುತ್ತಿದ್ದಾರೆ.

‘ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೀಡಾದರು. ಆದರೆ, ನಮ್ಮ ಜಮೀನಿನಲ್ಲಿ ಎರಡು ಕೊಳವೆಬಾವಿ ಇದ್ದಿದ್ದರಿಂದ ಹೆಚ್ಚಿನ ಸಮಸ್ಯೆ ಆಗಲಿಲ್ಲ. ಬೇಡಿಕೆ ಆಧರಿಸಿ ಬೆಳೆಗಳಿಗೆ ನಿಯಮಿತವಾಗಿ ನೀರುಣಿಸುತ್ತೇನೆ. ನನ್ನೊಂದಿಗೆ ಕುಟುಂಬದವರು ಕೃಷಿ ಕೆಲಸಕ್ಕೆ ಕೈಜೋಡಿಸುತ್ತಾರೆ. ಸುಗ್ಗಿಯ ಕಾಲದಲ್ಲಷ್ಟೇ ಕೂಲಿಗಳ ನೆರವು ಪಡೆಯುತ್ತೇವೆ’ ಎಂದು ಶಿವಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಗಳಿಸಿದ್ದಾರೆ?: ‘ನಾವು ಬೆಳೆಯುವ ರೇಷ್ಮೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ರಾಮನಗರ ಮತ್ತು ಗೋಕಾಕದಲ್ಲಿ ಇದನ್ನು ಮಾರಾಟ ಮಾಡುತ್ತೇವೆ. ಇದೊಂದೇ ಬೆಳೆಯಿಂದ ವರ್ಷಕ್ಕೆ ₹1.5 ಲಕ್ಷಕ್ಕೂ ಅಧಿಕ ಆದಾಯ ಕೈಗೆಟುಕುತ್ತದೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಗೋಧಿ ಬೆಳೆಯುತ್ತೇನೆ. ಒಟ್ಟಾರೆ ಕೃಷಿಯಿಂದ ವಾರ್ಷಿಕ ₹4 ಲಕ್ಷ ಲಾಭವಾಗುತ್ತಿದೆ’ ಎಂದು ವಿವರಿಸಿದರು.

‘ಒಕ್ಕಲುತನಕ್ಕೆ ಭಾಗಶಃ ಸಾವಯವ ಉತ್ಪನ್ನಗಳನ್ನೇ ಬಳಸುತ್ತೇನೆ. ತುರ್ತು ಅಗತ್ಯವಿದ್ದಾಗ ಮಾತ್ರ, ಕೆಲ ಪ್ರಮಾಣದಲ್ಲಿ ರಾಸಾಯನಿಕ ಬಳಸುತ್ತಿದ್ದೇನೆ. ಸಾವಯವ ಕೃಷಿಗೆ ಆದ್ಯತೆ ನೀಡುವಂತೆ ಸುತ್ತಲಿನ ರೈತರಲ್ಲೂ ಜಾಗೃತಿ ಮೂಡಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಬೈಲಹೊಂಗಲ ತಾಲ್ಲೂಕಿನ ಯರಡಾಲದ ರೈತ ಶಿವಾನಂದ ಸಿದ್ನಾಳ ಅವರ ರೇಷ್ಮೆ ಕೃಷಿ
ಬೈಲಹೊಂಗಲ ತಾಲ್ಲೂಕಿನ ಯರಡಾಲದ ರೈತ ಶಿವಾನಂದ ಸಿದ್ನಾಳ ಅವರ ರೇಷ್ಮೆ ಕೃಷಿ

ಸೇನೆಯಿಂದ ನಿವೃತ್ತಿಯಾದ ಬಳಿಕ ಮುಂದೇನು ಎಂಬ ಚಿಂತೆ ಬಹಳ ಜನರನ್ನು ಕಾಡುತ್ತದೆ. ಆದರೆ ನಾನು ಇದ್ದ ಸ್ವಲ್ಪ ಜಮೀನಿನಲ್ಲೇ ಸಮೃದ್ಧ ಕೃಷಿ ಮಾಡಿ ನೆಮ್ಮದಿಯಿಂದ ಇದ್ದೇನೆ ಶಿವಾನಂದ ಸಿದ್ನಾಳ ರೈತ ಯರಡಾಲ

ಪ್ರಶಸ್ತಿ– ಗೌರವ ಶೂನ್ಯ

ಉಳುಮೆಯಲ್ಲಿ ಯಶಸ್ವಿಯಾಗಿ ಕಬ್ಬು ಕೃಷಿ ಮಾಡಿದ ಹಿನ್ನೆಲೆಯಲ್ಲಿ 2013ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ‘ಆವಿಷ್ಕಾರಿ ರೈತ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಾವಯವ ಮತ್ತು ರೇಷ್ಮೆ ಕೃಷಿಯಲ್ಲಿ ಮಾಡಿದ ಸಾಧನೆಗಾಗಿ 2018ರಲ್ಲಿ ಕೃಷಿ ಇಲಾಖೆಯಿಂದ ‘ಆತ್ಮ’ ಯೋಜನೆಯಡಿ ತಾಲ್ಲೂಕುಮಟ್ಟದ ಶ್ರೇಷ್ಠ ರೈತ ಪ್ರಶಸ್ತಿ ನೀಡಲಾಗಿದೆ. ಅವರ ಸಾಧನೆಗೆ ಜಿಲ್ಲೆಯ ವಿವಿಧ ರೈತ ಸಂಘಟನೆಗಳೂ ಸನ್ಮಾನ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT