ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ನಿಮಿಷಕ್ಕೊಂದು ಬಾಂಬ್ ಬೀಳುತ್ತಿತ್ತು: ಉಕ್ರೇನ್‌ನಿಂದ ಮರಳಿದ ಬ್ರಾಹ್ಮಿ ಮಾತು

Last Updated 6 ಮಾರ್ಚ್ 2022, 11:12 IST
ಅಕ್ಷರ ಗಾತ್ರ

ಬೆಳಗಾವಿ: ‘ಉಕ್ರೇನ್‌ನಲ್ಲಿ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಪ್ರತಿ 10 ನಿಮಿಷಕ್ಕೊಂದು ಬಾಂಬ್‌ ಸ್ಫೋಟವಾಗುತ್ತಿತ್ತು. ಶೆಲ್ ದಾಳಿಯಾಗುತ್ತಿತ್ತು’.

ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಚಿಕ್ಕೋಡಿಯ ಬ್ರಾಹ್ಮಿ ಪಾಟೀಲ ಅವರು ಅನುಭವ ಹಂಚಿಕೊಂಡರು.

‘ಕೀವ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದೆವು. ಫೆ.24ರಂದು ನಾವು ವಾಪಸಾಗಲು ಟಿಕೆಟ್‌ ಬುಕ್‌ ಆಗಿತ್ತು. ಆದರೆ, ಬಾಂಬ್ ದಾಳಿ ಆರಂಭವಾದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಪಡಿಸಲಾಗಿತ್ತು. ಬಂಕರ್‌ಗಳಲ್ಲಿ ತಂಗಿದ್ದೆವು. ಕೀವ್‌ನಿಂದ ರೈಲಿನ ಮೂಲಕ ಗಡಿ ತಲುಪಿದೆವು’ ಎಂದು ಎಂಬಿಬಿಎಸ್ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಬ್ರಾಹ್ಮಿ ತಿಳಿಸಿದರು.

‘ಹಾರ್ಕಿವ್, ಕೀವ್ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕು. ನಮ್ಮ ವಿಶ್ವವಿದ್ಯಾಲಯದಲ್ಲಿದ್ದ ಕರ್ನಾಟಕದವರು ಸೇರಿದಂತೆ ದೇಶದ ಬಹುತೇಕರು ವಾಪಸ್ ಆಗಿದ್ದಾರೆ. ರೊಮೇನಿಯಾ ಸರ್ಕಾರದವರೂ ಸಹಾಯ ಮಾಡಿದರು’ ಎಂದು ಹೇಳಿದರು.

ರೊಮೇನಿಯಾದಿಂದ ದೆಹಲಿ–ಬೆಂಗಳೂರು ಮಾರ್ಗವಾಗಿ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಂದ ಬ್ರಾಹ್ಮಿ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬರಮಾಡಿಕೊಂಡರು.

ಮಗಳನ್ನು ಕಂಡ ಪೋಷಕರು ನಿಟ್ಟುಸಿರು ಬಿಟ್ಟರು. ತಾಯಿ–ಮಗಳು ತಬ್ಬಿಕೊಂಡು ಕಣ್ಣೀರಿಟ್ಟರು.

ಸರ್ಕಾರದಿಂದ ಕ್ರಮ: ಈ ವೇಳೆ ಮಾತನಾಡಿದ ಸಚಿವರು, ‘ವೈದ್ಯಕೀಯ ಕೋರ್ಸ್‌ ವಿದ್ಯಾಭ್ಯಾಸಕ್ಕೆ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿನಿ ಸುರಕ್ಷಿತವಾಗಿ ಮರಳಿದ್ದರಿಂದ ಸಂತೋಷವಾಗಿದೆ. ಉಕ್ರೇನ್‌ನಿಂದ 15ಸಾವಿರ ಮಂದಿಯನ್ನು ನಮ್ಮ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಇನ್ನೂ ಹದಿನೈದು ಸಾವಿರ ಮಂದಿ ಮರಳುವವರಿದ್ದಾರೆ. ಎಲ್ಲರನ್ನೂ ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ವರು ಸಚಿವರನ್ನು ನಿಯೋಜನೆ ಮಾಡಿದ್ದಾರೆ. 2–3 ದಿನಗಳಲ್ಲಿ ಎಲ್ಲರೂ ಬಂದು ಸೇರಬಹುದು’ ಎಂದು ತಿಳಿಸಿದರು.

‘ಆಪರೇಷನ್ ಗಂಗಾ’ ಬಗ್ಗೆ ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಸದ್ಯಕ್ಕೆ ಉಕ್ರೇನ್‌ನಿಂದ ಬರುವವರನ್ನು ಸ್ವಾಗತಿಸೋಣ; ನಂತರ ಕಾಂಗ್ರೆಸ್‌ನವರು ಬಗ್ಗೆ ಮಾತಾಡೋಣ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಮಕ್ಕಳನ್ನು ತಂದು ಅವರವರ ಊರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದೆ’ ಎಂದು ಹೇಳಿದರು.

ಮೂವರಷ್ಟೆ ಬರಬೇಕಿದೆ: ‘ಹಾವೇರಿಯ ವಿದ್ಯಾರ್ಥಿ ನವೀನ್ ಮೃತದೇಹ ಎಲ್ಲಿಯೂ ಹೋಗಿಲ್ಲ. ಅದನ್ನು ಉಕ್ರೇನ್‌ನಿಂದ ತಂದೇ ತರುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಈ ಬಗ್ಗೆ ಹೇಳಿದ್ದಾರೆ. ತರಿಸುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಜಿಲ್ಲೆಯ 20 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದರು. ಈಗಾಗಲೇ 10 ಮಂದಿ ವಾಪಸಾಗಿದ್ದಾರೆ. 7 ಮಂದಿ ದೆಹಲಿ ತಲುಪಿದ್ದಾರೆ. ಉಳಿದ ಮೂವರನ್ನೂ ಕರೆತರಲು ಸರ್ಕಾರ ಕ್ರಮ ವಹಿಸಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರವರ ಊರು ತಲುಪಿಸುವಂತೆ ಮುಖ್ಯಮಂತ್ರಿ ಅವರಿಂದ ಸೂಚನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT