ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಣೀಯ ಸ್ಥಳವಾಗುವತ್ತ ಸಂಗೊಳ್ಳಿ ರಾಯಣ್ಣನ ನಂದಗಡ

ಭರದಿಂದ ಸಾಗಿದೆ ಕ್ರಾಂತಿವೀರರ ಇತಿಹಾಸ ನೋಡಿ ತಿಳಿಯುವ ಕಾಮಗಾರಿ
Last Updated 4 ಡಿಸೆಂಬರ್ 2022, 5:36 IST
ಅಕ್ಷರ ಗಾತ್ರ

ನಂದಗಡ (ಖಾನಾಪುರ ತಾಲ್ಲೂಕು): ಕ್ರಾಂತಿಯ ನೆಲ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ತಾಲ್ಲೂಕಿನ ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭವಾಗಿದೆ. ಈ ಸ್ಥಳಕ್ಕೆ ಜಾಗತಿಕ ಗುರುತು ತಂದುಕೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹಲವು ವರ್ಷಗಳಿಂದ ನಂದಗಡ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚನ್ನಮ್ಮನ ಕಿತ್ತೂರು, ಬೈಲಹೊಂಗಲದಲ್ಲಿ ಆದಂಥ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯೂ ಮಾಡಬೇಕು ಎಂದು ಜನ ದಶಕದಿಂದ ಹೋರಾಟ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶುಕ್ರದೆಸೆ ಆರಂಭವಾಗಿದೆ.

ಗ್ರಾಮದಲ್ಲಿರುವ ರಾಯಣ್ಣನ ಸಮಾಧಿ ಸ್ಥಳ ಮತ್ತು ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ‘ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಿದೆ. ಈ ಪ್ರಾಧಿಕಾರದ ವತಿಯಿಂದ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ವೀರಭೂಮಿ ನಿರ್ಮಾಣ, ರಾಯಣ್ಣನ ಸಮಾಧಿ ಸ್ಥಳದ ಬಳಿ ಯಾತ್ರಿ ನಿವಾಸ ನಿರ್ಮಾಣ, ಐತಿಹಾಸಿಕ ಕೆರೆ ಜೀರ್ಣೋದ್ಧಾರ ಮಾಡಲಾಗಿದೆ.

ವಿಶೇಷ ಆಕರ್ಷಣೆ ಮಾಡುವ ರಾಕ್ ಗಾರ್ಡನ್, ಗರಡಿ ಮನೆ, ಸೈನಿಕ ಶಾಲೆ ಮತ್ತಿತರ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಪ್ರಾಧಿಕಾರದ ವತಿಯಿಂದ ರಾಯಣ್ಣನ ಜನ್ಮಭೂಮಿ ಸಂಗೊಳ್ಳಿಯಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿವೀರ ರಾಯಣ್ಣನ ತ್ಯಾಗ– ಬಲಿದಾನಗಳು ಮುಂದಿನ ಪೀಳಿಗೆಗೆ ಸಚಿತ್ರವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ವೈವಿಧ್ಯಮಯ ಹಾಗೂ ದೂರದೃಷ್ಟಿಯ ಕೆಲಗಳನ್ನು ಮಾಡಲಾಗುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ಶತಮಾನ ಮುಂಚೆ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಟ ನಡೆಸಿದಳು. ಆ ಮೂಲಕ ದೇಶದ ಮೊದಲ ಸ್ವಾತಂತ್ರ್ಯದ ಕಿಡಿ ಎಂದೇ ಖ್ಯಾತಳಾದಳು. ಚನ್ನಮ್ಮನ ಬಲಗೈಬಂಟ ಎಂದೇ ಇತಿಹಾಸದಲ್ಲಿ ದಾಖಲಾದ ಸಂಗೊಳ್ಳಿ ರಾಯಣ್ಣ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಂದಗಡಕ್ಕೆ ಬರುವ ಎಲ್ಲರಿಗೂ ಈ ಇತಿಹಾಸ ತಿಳಿಯುವಂತೆ ಮಾಡಲಾಗುತ್ತಿದೆ.

ಇತಿಹಾಸಕಾರರು ಉಲ್ಲೇಖಿಸಿದಂತೆ, ರಾಯಣ್ಣನನ್ನು ನಂದಗಡ ಗ್ರಾಮದ ಹೊರವಲಯದ ಆಲದ ಮರಕ್ಕೆ ನೇಣು ಹಾಕಲಾಯಿತು. ನಂತರ ಆತನ ಇಚ್ಛೆಯಂತೆ ಈಗಿರುವ ಸಮಾಧಿ ಸ್ಥಳದಲ್ಲಿ ಮಣ್ಣು ಮಾಡಲಾಯಿತು. ರಾಯಣ್ಣನ ಸಹಚರ ಬಿಚ್ಚುಗತ್ತಿ ಚನ್ನಬಸಪ್ಪ ರಾಯಣ್ಣನ ನೆನಪಿಗಾಗಿ
ಆತನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಮತ್ತು ಮಣ್ಣು ಮಾಡಿದ ಸ್ಥಳದಲ್ಲಿ ಆಲದ ಸಸಿಗಳನ್ನು ನೆಟ್ಟ. ಈ ಎರಡೂ ಸ್ಥಳದಳಲ್ಲಿ ಶತಮಾನದಿಂದ ಆಲದ ಮರಗಳ ಗಟ್ಟಿಯಾಗಿ ನಿಂತಿವೆ.

ಅವಿನಾಭಾವ ನಂಟು

ನಂದಗಡ ಗ್ರಾಮಕ್ಕೂ ಸಂಗೊಳ್ಳಿ ರಾಯಣ್ಣನಿಗೂ ಅವಿನಾಭಾವ ನಂಟಿದೆ. ಗ್ರಾಮದ ರಾಯಾಪುರ ಬೀದಿಯಲ್ಲಿ ರಾಯಣ್ಣನ ಸಮಾಧಿಯಿದೆ. ಊರಿನ ಹೊರಭಾಗದಲ್ಲಿರುವ ಆಲದಮರ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳವಿದೆ. ಈ ಎರಡೂ ತಾಣಗಳಿಂದಾಗಿ ನಂದಗಡ ಗ್ರಾಮ ಐತಿಹಾಸಿಕ ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT