ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿಂದಿನ ಪಿಡಿಒ, ಅಧ್ಯಕ್ಷರ ವಿಚಾರಣೆ, ಕಾಮಗಾರಿ ಪರಿಶೀಲನೆ

ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ
Last Updated 19 ಏಪ್ರಿಲ್ 2022, 8:48 IST
ಅಕ್ಷರ ಗಾತ್ರ

ಬೆಳಗಾವಿ: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಉಡುಪಿ ಪೊಲೀಸ್‌ ತಂಡದವರು, ತಾಲ್ಲೂಕಿನ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ ಮನ್ನೋಳಕರ ಮತ್ತು ನಿಕಟಪೂರ್ವ ಪಿಡಿಒ ಗಂಗಾಧರ ನಾಯಿಕ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಇಲ್ಲಿಯೇ ಬೀಡುಬಿಟ್ಟಿರುವ ಪೊಲೀಸರು, ಗ್ರಾಮ ಪಂಚಾಯ್ತಿಯಲ್ಲಿ ಕಡತಗಳನ್ನು ಕೂಡ ಪರಿಶೀಲಿಸಿದ್ದಾರೆ. ರಸ್ತೆಗಳ ಅಳತೆ ಕಾರ್ಯವನ್ನೂ ಮಾಡಿಸಿದ್ದಾರೆ.

ಸಂತೋಷ್‌ ಹೋದ ವರ್ಷ ಕಾಮಗಾರಿ ನಡೆಸಿದಾಗ ಪಿಡಿಒ ಆಗಿದ್ದ ಗಂಗಾಧರ ನಾಯಿಕ ಅವರನ್ನು ಪೊಲೀಸರು ಪಂಚಾಯ್ತಿಗೆ ಕರೆಸಿ ವಿಚಾರಣೆ ನಡೆಸಿದರು.

‘ಗುತ್ತಿಗೆದಾರರು, ಕಾಮಗಾರಿಗೆ ಮುನ್ನ ಪಂಚಾಯ್ತಿಯಿಂದ ಅನುಮತಿ ಪಡೆದಿದ್ದರೇ, ಎಲ್ಲೆಲ್ಲಿ ಕಾಮಗಾರಿ ನಡೆಸಲಾಗಿದೆ, ಕೆಲಸ ಆಗಿರುವುದು ನಿಜವೇ, ಕಾರ್ಯಾದೇಶಪತ್ರವಿಲ್ಲದೆ ಹೇಗೆ ಅವಕಾಶ ಕೊಟ್ಟಿರಿ, ಇದು ಸರ್ಕಾರಕ್ಕೆ ವರದಿಯಾಗಿದೆಯೇ’ ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ವಿಚಾರಣೆ:ವಿಚಾರಣೆ ಮುಗಿಸಿ ತೆರಳುತ್ತಿದ್ದ ಗಂಗಾಧರ್, ‘ತನಿಖೆ ನಡೆದಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ತಿಳಿಸಿದರು.

ಇನ್‌ಸ್ಪೆಕ್ಟರ್‌ ಶರಣಗೌಡ ಪಾಟೀಲ ನೇತೃತ್ವದ ತಂಡದವರು ಹಿಂಡಲಗಾ ಲಕ್ಷ್ಮಿ ನಗರ ಸಮರ್ಥ ಕಾಲೊನಿಯಲ್ಲಿ ನಾಗೇಶ ಮನೆಗೆ ಭೇಟಿ ನೀಡಿದ್ದರು. ಸಂತೋಷ್ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಅವರಿಂದ ಕೆಲವು ದಾಖಲೆಗಳನ್ನು ಪಡೆದರು. ಸಂತೋಷ್‌ ಮಾತಿನ ಮೇರೆಗೆ ಕಾಮಗಾರಿ ಮಾಡಿದ್ದ 12 ಉಪಗುತ್ತಿಗೆದಾರರು ಕೂಡ ಅಲ್ಲಿ ಹಾಜರಾಗಿ ಮಾಹಿತಿ ನೀಡಿದ್ದಾರೆ. ತಾವು ನಿರ್ವಹಿಸಿದ ಕೆಲಸ ಹಾಗೂ ಬರಬೇಕಾದ ಹಣದ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಒತ್ತಡ ಹಾಕಿಲ್ಲ:ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಗೇಶ, ‘ಸಂತೋಷ್‌ ₹ 50 ಲಕ್ಷ ಮೊತ್ತದ ಕಾಮಗಾರಿ ಸ್ವತಃ ನಿರ್ವಹಿಸಿದ್ದ. ಉಳಿದವುಗಳನ್ನು 12 ಮಂದಿಗೆ ಉಪ ಗುತ್ತಿಗೆ ಕೊಟ್ಟಿದ್ದ. ಎಲ್ಲರೂ ಸೇರಿ ₹ 4 ಕೋಟಿ ಮೊತ್ತದ ಒಟ್ಟು 108 ಕಾಮಗಾರಿಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.

‘ಗುತ್ತಿಗೆದಾರರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ. ನಾನೂ ಹೋಗಿದ್ದೆ. ಸರ್ಕಾರದೊಂದಿಗೆ ಮಾತನಾಡಿ ಹಣ ಕೊಡಿಸುವಂತೆ ಗುತ್ತಿಗೆದಾರರು ಕೋರಿದ್ದಾರೆ. ಕಾಮಗಾರಿ ವಿಚಾರವಾಗಿ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾಗುವಂತೆ ರಮೇಶ ಜಾರಕಿಹೊಳಿ ತಿಳಿಸಿರಲಿಲ್ಲ. ಕಾರ್ಯಾದೇಶ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಮಗಾರಿಗೆ ಪಂಚಾಯ್ತಿಯಲ್ಲಿ ಯಾವುದೇ ಠರಾವು ಮಾಡಿಲ್ಲ. ಇಲಾಖೆಯ ವಿಶೇಷ ನಿಧಿಯಲ್ಲಿ ಕೆಲಸ ಮಾಡುತ್ತಿದ್ದೇನೆ; ಹೀಗಾಗಿ ಠರಾವು ಅಗತ್ಯವಿಲ್ಲ ಎಂದು ಸಂತೋಷ್‌ ಹೇಳಿದ್ದ. ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿ ನಡೆದಿರುವುದು ನಿಜ’ ಎಂದರು.

‘ಹಣದ ವಿಷಯದಲ್ಲಿ ಸಂತೋಷ್‌ಗೆ ಯಾರೂ ಒತ್ತಡ ಹಾಕಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT