ಮಂಗಳವಾರ, ಏಪ್ರಿಲ್ 7, 2020
19 °C
ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ಸಂತೆ

ಸಸ್ಯ ಸಂತೆ; ಸಸಿ ಮಾರಾಟ ಇಳಿಕೆ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿಯ ಸಸ್ಯಸಂತೆಯಲ್ಲಿ  ಮಾರಾಟಕ್ಕಿದ್ದ ಸಸಿಗಳು

ಬೆಳಗಾವಿ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ತೋಟಗಾರಿಕಾ ಇಲಾಖೆಯು ನಗರದ ಹ್ಯೂಮ್‌ ಪಾರ್ಕ್‌ನಲ್ಲಿ 21 ದಿನಗಳವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ ಕಾರ್ಯಕ್ರಮ ಸೋಮವಾರ ಕೊನೆಗೊಂಡಿತು. ಈ ಅವಧಿಯಲ್ಲಿ ಸುಮಾರು 33,000 ಸಸಿಗಳು ಮಾರಾಟವಾಗಿದ್ದು, ಇಲಾಖೆಗೆ ₹ 10.50 ಲಕ್ಷ ಆದಾಯ ಬಂದಿದೆ.

ಸುಸಜ್ಜಿತವಾದ ಸಸ್ಯಪಾಲನಾ ಕೇಂದ್ರಗಳಲ್ಲಿ ಬೆಳೆಯಲಾದ ಉತ್ತಮ ಗುಣಮಟ್ಟದ ಸಸಿಗಳನ್ನು ರೈತರಿಗೆ ಹಾಗೂ ಬೆಳೆಗಾರರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ಹಲವು ವರ್ಷಗಳಿಂದ ಸಸ್ಯ ಸಂತೆಯನ್ನು ಹಮ್ಮಿಕೊಳ್ಳುತ್ತ ಬಂದಿದೆ. ಸಾಮಾನ್ಯವಾಗಿ ಮಳೆಗಾಲ ಆರಂಭವಾಗುವ ಜೂನ್‌ ತಿಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷ 69,000 ಸಸಿಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಅರ್ಧಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಸಿಗಳು ಮಾರಾಟವಾಗಿವೆ.

ತೆಂಗಿನ ಸಸಿಗೆ ಹೆಚ್ಚು ಬೇಡಿಕೆ: ಮಾವು, ತೆಂಗು, ಬಾಳೆ, ಸಪೋಟಾ ಸೇರಿದಂತೆ ಹಲವು ಬಗೆಯ ಸಸಿಗಳು ಮಾರಾಟಕ್ಕೆ ಲಭ್ಯವಾಗಿದ್ದವು. ಇವುಗಳಲ್ಲಿ ತೆಂಗಿನ ಸಸಿಗೆ ಹೆಚ್ಚು ಬೇಡಿಕೆ ಬಂದಿದೆ. ಹೊಲಗಳ ಬದುವಿನಲ್ಲಿ ಬೆಳೆಸಲು ಅಲ್ಲದೇ, ಮನೆಯಂಗಳದಲ್ಲಿ ಬೆಳೆಸಲು ಕೂಡ ಇದು ಸಹಕಾರಿಯಾಗಿದೆ. ಈ ಕಾರಣಕ್ಕಾಗಿ ರೈತರಲ್ಲದೇ, ನಗರ ವಾಸಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತೆಂಗು ಖರೀದಿಸಿದ್ದಾರೆ.

ಹೂವು ಹಾಗೂ ಅಲಂಕಾರಿಕ ಸಸಿಗಳಿಗೂ ಹೆಚ್ಚಿನ ಬೇಡಿಕೆ ಬಂದಿತ್ತು. ನಗರವಾಸಿಗಳು ತಮ್ಮ ಮನೆಯ ಅಂಗಳದಲ್ಲಿ ಹಾಗೂ ಮನೆಯ ಮಾಳಿಗೆ ಮೇಲೆ (ಟರೇಸ್‌ ಗಾರ್ಡನ್‌) ಬೆಳೆಸುವ ಉದ್ದೇಶದಿಂದ ಖರೀದಿಸಿದ್ದರು. ಗುಲಾಬಿ, ಮಲ್ಲಿಗೆ ಹಾಗೂ ಜಲಬೇರಾ ಸಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರು.

ಪೋಷಕಾಂಶಗಳಿಗೂ ಡಿಮ್ಯಾಂಡ್‌: ಮಾವು, ಬಾಳೆ ಹಾಗೂ ತರಕಾರಿಗಳಿಗೆ ಬೆಂಗಳೂರಿನ ಪ್ರಯೋಗಾಲಯವು ಸಿದ್ಧಪಡಿಸಲಾಗಿರುವ ವಿಶೇಷ ಲಘುಪೋಷಕಾಂಶವನ್ನು ಇಲ್ಲಿ ಮೊದಲ ಬಾರಿಗೆ ಮಾರಾಟ ಮಾಡಲಾಯಿತು. ರೈತರ ಪ್ರತಿಕ್ರಿಯೆ ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ಮಾವು ಹಾಗೂ ಬಾಳೆಯ ಲಘುಪೋಷಕಾಂಶವನ್ನು ತಲಾ 100 ಪ್ಯಾಕೇಟ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಕೆ.ಜಿ.ಗೆ ₹ 150 ದರ ನಿಗದಿಪಡಿಸಲಾಗಿತ್ತು. ಇದರ ಜೊತೆಗೆ ಎರೆಹುಳು ಗೊಬ್ಬರ ಕೂಡ ಮಾರಾಟ ಮಾಡಲಾಗಿತ್ತು. ಸುಮಾರು 1.5 ಕ್ವಿಂಟಲ್‌ ಮಾರಾಟವಾಗಿದೆ. ಇದರಿಂದ ಸರ್ಕಾರಕ್ಕೆ ₹ 1.30 ಲಕ್ಷ ಆದಾಯ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು