ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಶಿಕ್ಷಣದ ಕ್ರಾಂತಿ ಜ್ಯೋತಿ ಸಾವಿತ್ರಿ’

ಡಾ.ಶಾಂತಾ ನಾವಿಂದಗಿ ಅಭಿಮತ
Last Updated 5 ಜನವರಿ 2020, 13:52 IST
ಅಕ್ಷರ ಗಾತ್ರ

ಅಥಣಿ: ‘ಸಾವಿತ್ರಿಬಾಯಿ ಫುಲೆ ಅವರು ದೇಶದಲ್ಲಿ ಮಹಿಳಾ ಶಿಕ್ಷಣದ ಕ್ರಾಂತಿ ಜ್ಯೋತಿಯಾಗಿದ್ದಾರೆ’ ಎಂದು ಕಲಬುರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಶಾಂತಾ ನಾವಿಂದಗಿ ಸ್ಮರಿಸಿದರು.

ಇಲ್ಲಿನ ಶಿವಣಗಿ ಸಾಂಸ್ಕೃತಿಕ ಸಭಾಭವನದಲ್ಲಿ ಮಾಳಿವಾಣಿ ಹಾಗೂ ತಾಲ್ಲೂಕು ಮಾಳಿ/ಮಾಲಗಾರ ಸಮಾಜದಿಂದ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ, ‌ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ ವಧು-ವರರ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

‘ಭಾರತದ ಚರಿತ್ರೆಯ ಪುಟದಲ್ಲಿ, ಮಹಿಳಾ ಶಿಕ್ಷಣದ ಪರ ದನಿ ಎತ್ತಿದ ಮೊದಲಿಗರಾಗಿ ಸಾವಿತ್ರಿಬಾಯಿ ಹೆಸರು ಗಳಿಸಿದ್ದಾರೆ. ಆಗ ಹಿಂದೂ ಸ್ತ್ರೀಯೊಬ್ಬಳು ವಿದ್ಯೆ ಕಲಿತು, ಶಿಕ್ಷಕಿಯಾಗಿ ಸಮಾಜ ಹಾಗೂ ಧರ್ಮವನ್ನು ಹಾಳು ಮಾಡುತ್ತಿದ್ದಾಳೆ ಎಂಬ ಆಪಾದನೆ ಹೊತ್ತುಕೊಂಡು ಎಷ್ಟೋ ಅಸಹಾಯಕ ಹೆಣ್ಣುಮಕ್ಕಳ ಬಾಳಿನಲ್ಲಿ ಜ್ಞಾನದ ದೀಪ ಬೆಳಗಿಸಿದ ಅಸಾಮಾನ್ಯ ಮಹಿಳೆ’ ಎಂದು ತಿಳಿಸಿದರು.

‘ಅನೇಕ ಮಹಿಳೆಯರನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಿ ಸ್ತ್ರೀ ಸ್ವಾತಂತ್ರ್ಯದ ಕಹಳೆ ಊದಿದವರು. ಮಹಿಳೆ ನಾಲ್ಕು ಗೋಡೆಗಳಿಂದ ಹೊರಬಂದು ವಿದ್ಯೆ ಕಲಿಯುವುದು ಅಪರಾಧವಲ್ಲ ಎನ್ನುವುದನ್ನು ಗಟ್ಟಿ ದನಿಯಲ್ಲಿ ತಿಳಿಸಿದವರು. ಅವರು ನಡೆದ ಪ್ರತಿ ಹೆಜ್ಜೆಯೂ ಕಲ್ಲು ಮುಳ್ಳಿನ ಹಾದಿ. ಅದೊಂದು ಮಹಾನ್ ಚರಿತ್ರೆ’ ಎಂದರು.

ಮುಖಂಡ ಶಿವಾನಂದ ದಿವಾನಮಳ ಮಾತನಾಡಿ, ‘ಜ್ಯೋತಿಬಾ ಫುಲೆ ಹಾದಿಯಲ್ಲೇ ನಡೆದ ಸಾವಿತ್ರಿಬಾಯಿ ಸಮಾಜಕ್ಕೆ ಪುಷ್ಪಸುಗಂಧ ನೀಡಿದರು. 19ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆಯ ಬಿರುಗಾಳಿ ಬೀಸಲು ಕಾರಣವಾದರು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ‘ಫುಲೆ ದಂಪತಿಯ ಆದರ್ಶವನ್ನು ನಾವು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಆ ಮಹಾನ್‌ ವ್ಯಕ್ತಿಗಳಿಗೆ ಗೌರವ ಕೊಟ್ಟಂತಾಗುತ್ತದೆ’ ಎಂದರು.

ಬೆಳಗಾವಿಯ ಸುನಂದಾ ಮುಳೆ ಅವರಿಗೆ ‘ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಜಾತಾ ಹಣಮಂತ ಮಾಳಿ (ಬೆಳಗಾವಿ), ಗೀತಾ ಮಂಜು (ದಾವಣಗೆರೆ), ರೇಷ್ಮಾ ಪಿ.ಕೆ. (ಹಾವೇರಿ), ರಾಜಶ್ರೀ ಮೀರಜಕರ (ಬಾಗಲಕೋಟೆ), ಪಿ.ಬಿ. ಇಂದುಕಲಾ (ಬೆಂಗಳೂರು) ಆಯಾ ಜಿಲ್ಲಾಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು.

ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾದ ಜಗದೀಶ ಅಡಹಳ್ಳಿ, ಅಥಣಿ ಕಂದಾಯ ನಿರೀಕ್ಷಕ ತಮ್ಮಣ್ಣ ಖಲಾಟಿ, ಡಾ.ಪ್ರತಿಭಾ ಅಡಹಳ್ಳಿ, ಮಲ್ಲಿಕಾರ್ಜುನ ಮಾಳಿ, ಡಾ.ದೀಪಾ ಯಡವನ್ನನವರ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಬಸವರಾಜ ಗುಮಟಿ, ಡಾ.ಸಿ.ಬಿ. ಕುಲಗೋಡ, ಸದಾಶಿವ ಬುಟಾಳಿ, ಪರಪ್ಪ ಸೋನಕರ, ಸಿದರಾಯ ಭಾಸಿಂಗಿ, ಸಿದ್ದಣ್ಣ ಮಾಲಗಾರ, ಗಿರೀಶ ಬುಟಾಳಿ, ಶ್ರೀಶೈಲ ಹಳ್ಳದಮಳ, ಸುಭಾಸ ಕಾಗಲೆ, ರಮೇಶ ಕಾಗಲೆ, ಸುಭಾಸ ಮಾಳಿ, ಬಸವರಾಜ ಹಳ್ಳದಮಳ, ಪರಶುರಾಮ ಭಂಗಿ, ಮಹಾಂತೇಶ ಮಾಳಿ, ಪ್ರಶಾಂತ ತೋಡಕರ,ಚಿಕ್ಕೋಡಿ ಆರ್‌ಎಫ್‌ಒ ಸಂತೋಷ ಸುಂಬಳಿ ಇದ್ದರು.

ದೀಪಾ ಮಾಳಿ ನಿರೂಪಿಸಿದರು. ಸಂತೋಷ ಬಡಕಂಬಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT