ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಬಗ್ಗೆ ಭಯ ಬೇಡ: ಡಾ.ಅಕ್ಷಯ

Last Updated 10 ಡಿಸೆಂಬರ್ 2019, 16:27 IST
ಅಕ್ಷರ ಗಾತ್ರ

ಬೆಳಗಾವಿ: ‘ಕ್ಯಾನ್ಸರ್ ಮಾರಕ ರೋಗ ಎಂದು ಎಲ್ಲರೂ ಭಯ ಪಡುತ್ತಾರೆ. ಆದರೆ, ಭಯ ಬೀಳುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಶೀಘ್ರ ಗುಣವಾಗುತ್ತದೆ’ ಎಂದು ಡಾ.ಅಕ್ಷಯ ಮೆಟಗುಡ್ಡ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಇಲ್ಲಿನ ಮಹಾಂತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ಉಪನ್ಯಾಸ, ಪ್ರಶಸ್ತಿ ಪ್ರದಾನ, ದತ್ತಿ ಉಪನ್ಯಾಸ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಕಾ‍ಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು’ ಎಂದರು.

ನಿವೃತ್ತ ನ್ಯಾಯಾಧೀಶ ರಾಜಶೇಖರ ಶೆಟ್ಟರ, ‘ಎಲ್ಲರಿಗೂ ಕಾನೂನು ಅರಿವು ಅವಶ್ಯವಾಗಿದೆ. ಸಂಕಷ್ಟದ ಸಮಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಡಾ.ಸಾತ್ವಿಕ ಮೆಟಗುಡ್ಡ ಅವರು ಉದರದರ್ಶಕ ಶಸ್ತ್ರಚಿಕಿತ್ಸೆ ಕುರಿತು ಉಪನ್ಯಾಸ ನೀಡಿ, ‘ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ, ‘ವಿಜ್ಞಾನ ಸಾಹಿತ್ಯ ಕನ್ನಡದಲ್ಲಿ ಹೆಚ್ಚು ಹೆಚ್ಚು ಮೂಡಿಬರಬೇಕು. ನಮ್ಮ ಕನ್ನಡ ಭಾಷೆ ಉಳಿಸಿ, ಬೆಳೆಸುವಂತಹ ಕೆಲಸವಾಗಬೇಕು’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ಮಹಿಳೆಯರ ಜೀವ ಅಗ್ಗದ ವಸ್ತುವಿನಂತಾಗಿದೆ ಹಾಗೂ ಇಂದು ಸಮಾಜದಲ್ಲಿ ಮಹಿಳೆಯರು ಬದುಕದಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಶಾಂತಾದೇವಿ ಬಣಕಾರ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳ ಸಾಹಿತಿ ಅನ್ನಪೂರ್ಣಾ ಕನೋಜ ಅವರಿಗೆ ‘ಬಣಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ನಿವೃತ್ತ ನ್ಯಾಯಾಧೀಶ ರಾಜಶೇಖರ ಶೆಟ್ಟರ, ಡಾ.ಅಕ್ಷಯ ಮೆಟಗುಡ್ಡ, ಡಾ.ಸಾತ್ವಿಕ ಮೆಟಗುಡ್ಡ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತ ಪಡೆದ ನೀಲಗಂಗಾ ಚರಂತಿಮಠ, ಬಣಕಾರ ಪ್ರಶಸ್ತಿ ವಿಜೇತೆ ಅನ್ನಪೂರ್ಣಾ ಕನೋಜ, ಡಾ.ವನಿತಾ ಮೆಟಗುಡ್ಡ, ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿಗಳಾದ ಬಸವರಾಜ ಸಸಾಲಟ್ಟಿ, ಶ್ರೀರಂಗ ಜೋಶಿ, ವಿಜಯ ಬಡಿಗೇರ, ಹೇಮಾ ಸೊನೊಳ್ಳಿ ಇದ್ದರು.

ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಸ್ವಾಗತಿಸಿದರು. ಜಯಶೀಲಾ ಬ್ಯಾಕೋಡ ನಿರೂಪಿಸಿದರು. ಜ್ಯೋತಿ ಬದಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT