ಭಾನುವಾರ, ಏಪ್ರಿಲ್ 18, 2021
24 °C
ಹೇಳಿಕೆ

ಆತ್ಮವಿಮರ್ಶೆಯ ಧೈರ್ಯ ತುಂಬುವ ನೀತಿ: ವಿಟಿಯು ಕುಲಪತಿ ಪ್ರೊ.ಕೆ. ಕರಿಸಿದ್ದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಧೈರ್ಯ ಕೊಡುತ್ತದೆ’ ಎಂದು ವಿಟಿಯು ಕುಲಪತಿ ಪ್ರೊ.ಕೆ. ಕರಿಸಿದ್ದಪ್ಪ ಹೇಳಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ನೀತಿ ಆಯೋಗ ಹಾಗೂ ಭಾರತೀಯ ಶಿಕ್ಷಣ ಮಂಡಳದ ಸಹಯೋಗದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಬೋಧಕರಿಗೆ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ನೀತಿಯ ಪ್ರಕಾರ ಉನ್ನತ ಶಿಕ್ಷಣವನ್ನು ಕೊಡುವ ಎಷ್ಟೋ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿ ಬದಲಾಗುತ್ತವೆ. ಇದರಲ್ಲಿ ಶಿಕ್ಷಕರ ಜವಾಬ್ದಾರಿ ಬಹಳಷ್ಟಿದೆ. ಇದರ ಪರಿಣಾಮವಾಗಿ ಅನುಷ್ಠಾನದಲ್ಲಿ ಶಿಕ್ಷಕರ ಮನಸ್ಥಿತಿ ಮತ್ತು ಆಸಕ್ತಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಬ ಶಿಕ್ಷಕ ಎರಡು ಕಣ್ಣಿನಿಂದ ನೋಡಿದರೆ ಆ ಶಿಕ್ಷಕನನ್ನು ಹಲವು ಕಣ್ಣುಗಳು ನೋಡುತ್ತಿರುತ್ತವೆ’ ಎಂದರು.

ಬಹು ಜ್ಞಾನ ನೀಡುತ್ತದೆ: ‘ವಿದ್ಯಾರ್ಥಿಗಳಿಗೆ ಒಂದೇ ಕ್ಷೇತ್ರದ ವಿಷಯದ ಜ್ಞಾನ ನೀಡದೆ ಕಲೆ, ವಿಜ್ಞಾನ, ಅರ್ಥಶಾಸ್ತ್ರ, ತಂತ್ರಜ್ಞಾನ ಮೊದಲಾದವುಗಳಿಗೆ ಸಂಬಂಧಿಸಿದ ಬಹುಶಿಸ್ತೀಯ ಜ್ಞಾನವನ್ನು ನೀಡುತ್ತದೆ. ರಾಷ್ಟ್ರ ಪ್ರೇಮ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳ ಜ್ಞಾನವನ್ನೂ ಕೊಡುವುದು ನೀತಿಯ ಉದ್ದೇಶವಾಗಿದೆ’ ಎಂದು ಹೇಳಿದರು.

‘ನೀತಿಯ ಅನುಷ್ಠಾನದಲ್ಲಿ ವಿಟಿಯು ಒಂದು ಹೆಜ್ಜೆ ಮುಂದಿಟ್ಟಿದೆ. ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಇವೆಲ್ಲವೂ ಅಧೀನ ಎಂಜಿನಿಯರಿಂಗ್‌ ಕಾಲೇಜುಗಳಿಗೂ ಅನ್ವಯಿಸಲಿದೆ. ಇದಕ್ಕೆ ತಯಾರಾಗಬೇಕು. ಕಾಲೇಜಿನ ಪ್ರತಿ ವಿಭಾಗದೊಂದಿಗೆ ಕ್ಯಾಂಟೀನ್, ಹಾಸ್ಟೆಲ್ ಹಾಗೂ ಆಟದ ಮೈದಾನಗಳು ಕಲಿಕೆಯ ಮೂಲಗಳಾಗಿ ಕೆಲಸ ಮಾಡುವಂತೆ ನಾವು ಸಿದ್ಧವಾಗಬೇಕು. ಅನುಷ್ಠಾನದಲ್ಲಿ ನಾವೆಲ್ಲರೂ ಕೂಡಿ ಕಾರ್ಯನಿರ್ವಹಿಸಬೇಕು’ ಎಂದರು.

ಮೌಲ್ಯಗಳನ್ನು ತಿಳಿಸುತ್ತದೆ: ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆಎಲ್‌ಎಸ್‌–ಜಿಐಟಿಯ ಸಹ ಪ್ರಾಧ್ಯಾಪಕ ಪ್ರೊ.ಸಂದೀಪ ನಾಯರ್ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗುವ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಿದರು.

ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಭಾಸ್ಕರ ದೇಶಪಾಂಡೆ ಮಾತನಾಡಿ, ‘ಭಾರತವು ವಿಶ್ವಕ್ಕೆ ಜ್ಞಾನದ ಗುರು ಆಗಬೇಕು ಎಂಬ ಉದ್ದೇಶವನ್ನು ಈ ನೀತಿ ಹೊಂದಿದೆ. ಲೌಕಿಕ ಅಂಶಗಳ ಜೊತೆಗೆ ಭಾರತೀಯ ಸಾಂಸ್ಕೃತಿಕ ಹಾಗೂ ಬದುಕಿನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇದನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

‘ಈ ನೀತಿ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಅದರ ಪ್ರಮುಖ ಅಂಶಗಳನ್ನ ನಿತ್ಯದ ಪಠ್ಯಕ್ರಮದ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಭಾರತೀಯ ಶಿಕ್ಷಣ ಮಂಡಳ ವಿನಾಯಕ ಜೋಶಿ ಮಾತನಾಡಿದರು.

ಭಾರತೀಯ ಶಿಕ್ಷಣ ಮಂಡಳದ ಪ್ರಮುಖ ಕಲ್ಲನಗೌಡ ಅಳಗಾವಡಿ ಇದ್ದರು. ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರೊ.ವಿವೇಕ ರೆಡ್ಡಿ ಪರಿಚಯಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು