ಮಂಗಳವಾರ, ಜುಲೈ 27, 2021
27 °C
ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ

ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಕೇಂದ್ರ: ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್–19 ಸೋಂಕಿತ ಮಕ್ಕಳ ಆರೈಕೆಗಾಗಿ ಸುಸಜ್ಜಿತ ಹಾಗೂ ಪ್ರತ್ಯೇಕ ಕೇರ್ ಕೇಂದ್ರಗಳನ್ನು ಇಲಾಖೆಯಿಂದ ಆರಂಭಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಇಲಾಖೆಯಿಂದ ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರ ಆರಂಭಿಸಲಾಗಿದೆ. ಅಂತೆಯೇ ಏಕ ಪೋಷಕ ಮಕ್ಕಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹೇಳಿದರು.

‘ಕೋವಿಡ್‌ 2ನೇ ಮತ್ತು 3ನೇ ಅಲೆಯಿಂದ ಬಾಧಿತರಾಗುವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವೈದ್ಯಕೀಯ ಮತ್ತು ಊಟೋಪಹಾರದ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು.

ಸಿದ್ಧತೆ ಮಾಡಿಕೊಳ್ಳಿ:

‘3ನೇ ಅಲೆ ವೇಳೆ ಯಾವುದೇ ಮಕ್ಕಳಿಗೆ ತೊಂದರೆ ಆಗದಂತೆ ಮತ್ತು ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಜ್ಜಾಗಬೇಕು’ ಎಂದು ನಿರ್ದೇಶನ ನೀಡಿದರು.

‘2ನೇ ಅಲೆಯಲ್ಲಿ ರಾಜ್ಯದಲ್ಲಿ ಈವರೆಗೆ ಬಡ ಹಾಗೂ ಮಧ್ಯಮ ವರ್ಗದ 52 ಮಕ್ಕಳು ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಪೋಷಣೆ ಜವಾಬ್ದಾರಿಯನ್ನು ಇಲಾಖೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಾಲಸೇವಾ ಯೋಜನೆಯಲ್ಲಿ ಈ ಮಕ್ಕಳಿಗೆ ಪ್ರತಿ ತಿಂಗಳು ₹ 3,500, ಉಚಿತ ಶಿಕ್ಷಣ, ಹೆಣ್ಣು ಮಗುವಾಗಿದ್ದರೆ 18 ವರ್ಷದ ಬಳಿಕ ₹ 1 ಲಕ್ಷ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ, ‘ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‌, ಮಾಜಿ ದೇವದಾಸಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ದಿನಸಿ ಕಿಟ್‌ಗಳನ್ನು ಮತ್ತು ಅಗತ್ಯವಿರುವ ಮಕ್ಕಳಿಗೆ ಗಾಲಿಕುರ್ಚಿಗಳನ್ನು ವಿತರಿಸಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಂಸದೆ ಮಂಗಲಾ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಎಸ್ಪಿ ಲಕ್ಷ್ಮಣ ನಿಂಬರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ ಇದ್ದರು.

‘ನಾಲ್ವರು ಮಕ್ಕಳು ಸಾವು’

‘2ನೇ ಅಲೆಯ ಸಂದರ್ಭದಲ್ಲಿ ಬಿಮ್ಸ್‌ಗೆ ದಾಖಲಾದ 30 ಮಕ್ಕಳ ಪೈಕಿ ನಾಲ್ವರು ಮರಣ ಹೊಂದಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ’ ಎಂದು ಬಿಮ್ಸ್ ಪ್ರಭಾರ ನಿರ್ದೇಶಕ ಡಾ.ಉಮೇಶ್ ಕುಲಕರ್ಣಿ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ, ‘ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತಾಯಿ-ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಕೋವಿಡ್ ನಿರ್ವಹಣೆ ಹಾಗೂ ಲಸಿಕಾಕರಣದಲ್ಲಿ ಉತ್ತಮ ಕೆಲಸ ಮಾಡಲಾಗಿದೆ’ ಎಂದು ತಿಳಿಸಿದರು.

ಜಿ.ಪಂ. ಸಿಇಒ ಎಚ್.ವಿ. ದರ್ಶನ್, ‘ಸೋಂಕಿತ ಮಕ್ಕಳ ಚಿಕಿತ್ಸೆ ಹಾಗೂ ಪ್ರತ್ಯೇಕವಾಗಿರಿಸಲು ಅನುಕೂಲ ಆಗುವಂತೆ ಆರೈಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಮೊದಲ ಅಲೆಯಲ್ಲಿ 700ಕ್ಕೂ ಹೆಚ್ಚು ಮತ್ತು 2ನೇ ಅಲೆಯಲ್ಲಿ 2ಸಾವಿರ ಮಕ್ಕಳು ಸೋಂಕಿತರಾಗಿದ್ದು, ಆರೈಕೆ ನಂತರ ಗುಣಮುಖರಾಗಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು