ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಹಟ್ಟಿ’ ಶಾಲೆಯಲ್ಲಿ ಗಣಿತ–ಸಮಾಜಕ್ಕೊಂದು ಲೋಕ

ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕೆ
Last Updated 25 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎನ್ನುವ ಮನೋಭಾವ ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತು ಚಟುವಟಕೆಗಳ ಮೂಲಕ ಕಲಿಸುವ ಉದ್ದೇಶದಿಂದ ತಾಲ್ಲೂಕಿನ ಭೂತರಾಮನಹಟ್ಟಿ ಮಾದರಿ ಕನ್ನಡ ‌ಹಿರಿಯ ಸರ್ಕಾರಿ ಪ್ರಾಥಮಿಕ‌ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ‘ಗಣಿತ–ಸಮಾಜ ಲೋಕ’ ‍ಸ್ಥಾಪಿಸಿರುವುದು ಗಮನಸೆಳೆದಿದೆ.

ಶಿಕ್ಷಕರ ಕೋರಿಕೆ ಮೇರೆಗೆ ಲಿಂಗರಾಜ ಕಾಲೇಜಿನ ನಿವೃತ್ತ ಉಪನ್ಯಾಸಕಿ ಅಂಬಿಕಾ ಶಿಂಗೆ ಅವರು ನೀಡಿದ ಆರ್ಥಿಕ ನೆರವಲ್ಲಿ ಈ ‘ಲೋಕ’ ರೂಪಿಸಲಾಗಿದೆ. ಪೈ ಮತ್ತು ಪುಲಿಕೇಶಿ ಹೆಸರಿಡಲಾಗಿದೆ. ಅಲ್ಲಿ ಹಲವು ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಪ್ರಯೋಗಗಳ ಮೂಲಕ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ಸಜ್ಜುಗೊಳಿಸಲಾಗಿದೆ.

ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರು, ಅವರ ಫೋಟೊ, ಸಾಧನೆ ಮೊದಲಾವುಗಳು, ದೇಶದ ಇತಿಹಾಸ ಮತ್ತು ಸಾಮಾಜಿಕ ಸಾಮರಸ್ಯದ ಕುರಿತು ಕಟ್ಟಿಕೊಡಲಾಗಿದೆ.

ಮಕ್ಕಳೇ ತಿಳಿಸುತ್ತಾರೆ: ಅಲ್ಲಿರುವ ಮಾದರಿಗಳು, ಫೋಟೊಗಳು ಹಾಗೂ ಚಟುವಟಿಕೆಗಳ ಬಗ್ಗೆ ತಿಳಿಸಲು ಕೆಲವು ವಿದ್ಯಾರ್ಥಿಗಳನ್ನು ‘ಸಂಪನ್ಮೂಲ ವ್ಯಕ್ತಿ’ಗಳಂತೆ ಶಿಕ್ಷಕರು ಸಜ್ಜುಗೊಳಿಸಿದ್ದಾರೆ. ಅವರು ಸಂಪೂರ್ಣ ಪರಿಚಯಕ್ಕಾಗಿ ಸರಾಸರಿ ಎರಡೂವರೆಯಿಂದ 3 ತಾಸುಗಳನ್ನು ತೆಗೆದುಕೊಳ್ಳುತ್ತಾರೆ! ಅದನ್ನು ನೋಡಿದರೆ, ಅಬ್ಬಾ ಈ ಮಕ್ಕಳು ಎಷ್ಟೊಂದು ವಿಷಯ ತಿಳಿದಿದ್ದಾರಲ್ಲಾ ಎಂಬ ಮೆಚ್ಚುಗೆಯ ಮಾತುಗಳು ಬಾರದಿರವು.

‘ಕಬ್ಬಿಣದ ಕಡಲೆ ಕತ್ತರಿಸುವ ಕಾರ್ಯ ಮಾಡುವಂತಹ ಪ್ರಯೋಗಾಲಯ ಇದಾಗಿದೆ. ಇಲ್ಲಿ ಕಲಿತದ್ದನ್ನು ನಿತ್ಯ‌ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಕ್ಕಳಿಗೆ ತಿಳಿಸಲಾಗುತ್ತಿದೆ. ಚಟುವಟಿಕೆ ಆಧಾರಿತ ಕಲಿಕೆ ನೀಡಲಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ ತಿಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ನಕ್ಷೆಗಳು ಕೂಡ ಇವೆ’ ಎಂದು ವಿಜ್ಞಾನ ಶಿಕ್ಷಕ ಬಸವರಾಜ ಸುಂಗಾರಿ ತಿಳಿಸಿದರು.

ವಿವಿಧ ಶಾಲೆಗಳಿಂದ ಭೇಟಿ: ಈ ಶಾಲೆಯಲ್ಲಿ ‘ಪರಮಾಣು’ ಹೆಸರಿನ ವಿಜ್ಞಾನ ಪ್ರಯೋಗಾಲಯವೂ ಇದೆ. ಅಲ್ಲಿ ವಿಜ್ಞಾನದ ವಿಷಯಗಳನ್ನು ಕಲಿಸಲಾಗುತ್ತದೆ. ಪ್ರಯೋಗಗಳ ಮೂಲಕ ಮಾದರಿಗಳನ್ನು ಮಾಡಲು ಪ್ರೇರೇಪಿಸಿ ನಲಿಯುತ್ತಾ–ಚಟುವಟಿಕೆಗಳನ್ನು ಮಾಡುತ್ತಾ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಈ ಮೂಲಕ ಶಾಲೆಯು ಹೆಸರು ಗಳಿಸಿದೆ. ಸ್ಮಾರ್ಟ್‌ ಕಲಿಕಾ ಸೌಲಭ್ಯಗಳಿಂದ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ವಿವಿಧ ಶಾಲೆಗಳ ಎಸ್‌ಡಿಎಂಸಿಯವರು ಭೇಟಿ ನೀಡಿ, ಈ ಮಾದರಿ ಅಳವಡಿಸಿಕೊಳ್ಳುವ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಾರೆ ಎನ್ನುತ್ತಾರೆ ಶಿಕ್ಷಕರು.

ಇಲ್ಲಿ 1ರಿಂದ 8ನೇ ತರಗತಿಗಳಿವೆ. ಸದ್ಯ 340 ಮಕ್ಕಳಿದ್ದಾರೆ. ಮುಖ್ಯಶಿಕ್ಷಕಿ ಭಾರತಿ ಕುಡಬಾಳೆ ಸೇರಿದಂತೆ 9 ಮಂದಿ ಶಿಕ್ಷಕರಿದ್ದಾರೆ. ಭೂತರಾಮನಹಟ್ಟಿ, ಉಕ್ಕಡ, ರಾಮದುರ್ಗ, ಗೋಡಿಹಾಳ, ಗುಗ್ರ್ಯಾನಟ್ಟಿ, ಬೊಂಬರಗಾ ಹೊಸೂರು ಹಾಗೂ ಇಸ್ಲಾಂಪುರದಿಂದ ಇಲ್ಲಿಗೆ ಮಕ್ಕಳು ಬರುತ್ತಾರೆ.

ಮುಂಚಿತವಾಗಿಯೇ ಕೇಳುತ್ತಾರೆ!: ‘ಹಿಂದೆಲ್ಲಾ ಇಲ್ಲಿನ ಮಕ್ಕಳಿಗೆ ನಗರದ ಪ್ರೌಢಶಾಲೆಗಳಲ್ಲಿ 9ನೇ ತರಗತಿಯಿಂದ ಪ್ರವೇಶ ಕೊಡುತ್ತಿರಲಿಲ್ಲ. 8ನೇ ತರಗತಿಯಿಂದಲೇ ಪ್ರವೇಶ ಪಡೆಯುವಂತೆ ತಿಳಿಸುತ್ತಿದ್ದರು. ಆದರೆ, ಶಾಲೆಯು ಸ್ಮಾರ್ಟ್‌ ಆಗಿ ರೂಪಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳು ಹೊರಬರುತ್ತಿರುದರಿಂದ ಪ್ರವೇಶಕ್ಕೆ ಉತ್ಸಾಹ ತೋರುತ್ತಿವೆ. ನಿಮ್ಮ ಶಾಲೆಯಿಂದ ಎಷ್ಟು ಮಂದಿ ಬರುತ್ತಾರೆ ಎಂದು ಮುಂಚಿತವಾಗಿಯೇ ವಿಚಾರಿಸುತ್ತಾರೆ. ಇದೆಲ್ಲವೂ ಶಾಲೆ ಅಭಿವೃದ್ಧಿ ಹೊಂದಿದ್ದರಿಂದ ಸಾಧ್ಯವಾಗಿದೆ’ ಎಂದು ಶಿಕ್ಷಕರು ತಿಳಿಸಿದರು.

‘ಡಿಜಿಟಲ್ ಕ್ಲಾಸ್‌ ರೂಂ ರೂಪಿಸಲು ಯೋಜನೆ ಇದ್ದು, ದಾನಿಗಳು ಆರ್ಥಿಕವಾಗಿ ನೆರವಾದರೆ ಗ್ರಾಮೀಣ ಮಕ್ಕಳಿಗೆ ಮತ್ತಷ್ಟು ಗುಣಮಟ್ಟದ ಕಲಿಕೆ ನೀಡುವುದು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಸುಂಗಾರಿ.

ಸಂಪರ್ಕಕ್ಕೆ ಮೊ.ಸಂಖ್ಯೆ: 89518 75727.

ಮಕ್ಕಳಿಗೂ... ಪರೀಕ್ಷೆಗೂ...
ಈ ಶಾಲೆಯ ಗ್ರಂಥಾಲಯದಲ್ಲಿ 6ಸಾವಿರ ಪುಸ್ತಕಗಳಿವೆ. ಅವುಗಳನ್ನು ಅಲ್ಲಿನ ಮಕ್ಕಳೊಂದಿಗೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುವ ವಿವಿಧ ಗ್ರಾಮಗಳ ಹಳೆಯ ವಿದ್ಯಾರ್ಥಿಗಳಿಗೂ ಕೊಡಲಾಗುತ್ತಿದೆ.

ಸರಳವಾಗಿ ಕಲಿಯುತ್ತಿದ್ದೇವೆ
ಗಣಿತದ ಲೆಕ್ಕಗಳನ್ನು ಸರಳವಾಗಿ ಬಿಡಿಸುವುದನ್ನು ಈ ಪ್ರಯೋಗಾಲಯದಲ್ಲಿ ಚಟುವಟಿಕೆಗಳ ಮೂಲಕ ಕಲಿಯುತ್ತಿದ್ದೇವೆ.
–ಐಶ್ವರ್ಯಾ, 8ನೇ ತರಗತಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT