ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಇತಿಹಾಸ ಸಾರುವ ಶಿಲಾಯುಗದ ಶಿಲಾಯುಧ

Last Updated 17 ಫೆಬ್ರುವರಿ 2021, 16:29 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕ್ರಿಸ್ತ ಪೂರ್ವ ಐದು ಸಾವಿರ ವರ್ಷಗಳ ಹಳೆಯದಾದ ಶಿಲಾಯುಧ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಪತ್ತೆಯಾಗಿದೆ. ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ವತಿಯಿಂದ ಕೈಗೊಳ್ಳಲಾದ ಗ್ರಾಮ ಸರ್ವೇಕ್ಷಣೆ ಕಾರ್ಯದಲ್ಲಿ ಈ ಆಯುಧ ಪತ್ತೆಯಾಗಿದೆ.

ಬೈಲೂರಿನ ದುಂಡಪ್ಪ ಬಸವಣ್ಣೆಪ್ಪ ಕಾಪೋಲಿ ಅವರ ಜಮೀನಿನಲ್ಲಿ ಈ ಆಯುಧ ಪತ್ತೆಯಾಗಿದೆ. ಸಮೀಕ್ಷೆಯಲ್ಲಿ ಸಿಕ್ಕ ಈ ಶಿಲೆಯ ಲಕ್ಷಣ ಗಮನಿಸಿದರೆ ಇದು ನೂತನ ಶಿಲಾಯುಗಕ್ಕೆ ಸಂಬಂಧಿಸಿದ್ದಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

14 ಸೆಂ.ಮೀ ಉದ್ದ, 7 ಸೆಂ.ಮೀ. ಅಗಲ ಮತ್ತು 3 ಸೆಂ.ಮೀ. ದಪ್ಪವಿರುವ ಈ ಆಯುಧವನ್ನು ಸಿಸ್ಟ್ ಶಿಲೆಯಿಂದ ಮಾಡಲಾಗಿದೆ. ಉಜ್ಜಿ ನುಣುಪು ಮತ್ತು ನಯಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ದಂಡೆಯಲ್ಲಿ ಶಿಲಾಯುಧಗಳು ಪತ್ತೆಯಾಗಿದ್ದವು. ಆದರೆ, ಈ ಭಾಗದಲ್ಲಿ ಅಪರೂಪ ಎನ್ನುವಂತೆ ಇದು ಸಿಕ್ಕಿದೆ ಎಂದು ಇಲ್ಲಿನ ವಸ್ತುಸಂಗ್ರಹಾಲಯದ ಕ್ಯುರೇಟರ್ ರಾಘವೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶಿಲಾಯುಧ ಪತ್ತೆಯಾದ ಸ್ಥಳದಲ್ಲಿಯೇ ಮಹಾಸತಿ ವೀರಗಲ್ಲುಗಳು ಕಂಡು ಬಂದಿವೆ.ಇದನ್ನು ಗಮನಿಸಿದರೆ ನೂತನ ಶಿಲಾಯುಗದಿಂದ ಆಧುನಿಕ ಕಾಲದವರೆಗೂ ಮಾನವನ ಚಟುವಟಿಕೆ ಈ ಭಾಗದಲ್ಲಿ ಇರುವುದಕ್ಕೆ ಪುರಾವೆಯಾಗಿದೆ ಎನ್ನುತ್ತಾರೆ ಅವರು.

ಅಲೆಮಾರಿ ಜೀವನ ಬಿಟ್ಟು, ಒಂದು ಕಡೆಗೆ ನೆಲೆ ನಿಂತು ಜೀವನ ಸಾಗಿಸಿದ ಕಾಲಘಟ್ಟ ನೂತನ ಶಿಲಾಯುಗದ ಮಾನವನ ಸಂಸ್ಕೃತಿಯ ಲಕ್ಷಣಗಳಾಗಿವೆ. ಈ ಯುಗದಲ್ಲಿಯೇ ಮಾನವ ಭೂಮಿ ಸಾಗುವಳಿ ಮಾಡುವುದನ್ನು ಕಲಿತನು. ಪಶುಪಾಲನೆ ಕೈಗೊಂಡನು. ಮಡಿಕೆ ತಯಾರಿಕೆಯೂ ಈ ಕಾಲದಲ್ಲಿತ್ತು. ಮೃತ ದೇಹಕ್ಕೆ ಅಂತ್ಯಸಂಸ್ಕಾರ ಮಾಡುವ ಪದ್ಧತಿಯನ್ನು ಮಾನವ ಅಳವಡಿಸಿಕೊಂಡಿದ್ದನು ಎಂದು ವಿವರಿಸಿದರು.

ಎಂ.ಆರ್. ಶಹಾಪೂರ, ಮಂಜುನಾಥ ಕಳಸಣ್ಣವರ, ಪ್ರಾಧ್ಯಾಪಕ ಚಂದ್ರಶೇಖರ ತಾಬೋಜಿ, ಎಂ.ಎಸ್. ಯರಗುದ್ದಿ, ಅನ್ನಪ್ಪ ಕಾಪೋಲಿ ಅವರ ಸಹಕಾರವನ್ನು ಈ ದಾಖಲೀಕರಣದಲ್ಲಿ ಮರೆಯುವಂತಿಲ್ಲ ಎಂದು ಸ್ಮರಿಸುತ್ತಾರೆ ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT