ಶನಿವಾರ, ಸೆಪ್ಟೆಂಬರ್ 18, 2021
28 °C
ಗಮನಸೆಳೆದ ರೂಪಕಗಳು; ಪೊಲೀಸ್‌ ಭದ್ರತೆ

ಶಿವಾಜಿ ಜಯಂತಿ ಮೆರವಣಿಗೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬುಧವಾರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

‘ಶಿವಾಜಿ ಮಹಾರಾಜ್‌ ಕೀ ಜೈ, ಜೈ ಶಿವಾಜಿ–ಜೈ ಭವಾನಿ’ ಎಂಬ ಘೋಷಣೆಗಳ ಮಧ್ಯೆ ಆರಂಭವಾದ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು. ಶಿವಾಜಿಯ ಇತಿಹಾಸ ಸಾರುವ ಕಲಾಕೃತಿಗಳು, ವಾಧ್ಯಮೇಳಗಳು, ದೇಸಿ ಸೊಗಡಿನ ಢೋಲ-ತಾಷಾ, ಝಾಂಜ್ ಪಥಕಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ವಿವಿಧ ಬಡಾವಣೆಗಳ ಸಂಘ ಹಾಗೂ ಮಂಡಳಿಗಳು ರೂಪಕಗಳು ಶಿವಾಜಿಯ ಚರಿತ್ರೆ ಕಟ್ಟಿಕೊಟ್ಟವು. ಯುವಕ-ಯುವತಿಯರ ಮಂಡಳದವರು, ಮಹಿಳಾ ಸಂಘ-ಸಂಸ್ಥೆಗಳು ವಿವಿಧ ಪಾತ್ರಧಾರಿಗಳು ಕಿರುನಾಟಕಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಗಳಿಸಿದರು. ಶಿವಾಜಿಯ ಬಾಲ್ಯ, ಶಿಕ್ಷಣ, ಯುದ್ಧ ಕಲೆ, ಪಟ್ಟಾಭಿಷೇಕ, ಕೋಟೆಗಳನ್ನು ಗೆದ್ದು ರಾಜ್ಯಭಾರ ಮಾಡಿರುವ ಪ್ರಸಂಗಗಳು, ರಾಜತಾಂತ್ರಿಕತೆ ಹೀಗೆ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ನಾಟಕಗಳು ಪ್ರದರ್ಶನಗೊಂಡವು.

ಮೆರವಣಿಗೆಗೆ ಚಾಲನೆ:

ರವಿವಾರ ಪೇಟೆಯಲ್ಲಿ ಸಂಸದ ಸುರೇಶ ಅಂಗಡಿ ಚಾಲನೆ ನೀಡಿದರು. ಶಿವಾಜಿ ಮಹಾರಾಜರ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ, ಆರತಿ ಮಾಡಿ, ಭಕ್ತಿಗೀತೆಗಳನ್ನು ಹಾಡಲಾಯಿತು. ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಈ ಬಾರಿ 100 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ದೊಡ್ಡಮಟ್ಟದಲ್ಲಿ ಮೆರವಣಿಗೆ ನಡೆಯಿತು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಡಿಸಿಪಿ ಸೀಮಾ ಲಾಟ್ಕರ್, ಶಿವಾಜಿ ಉತ್ಸವ ಮಂಡಳಿ ಅಧ್ಯಕ್ಷ ದೀಪಕ ದಳವಿ, ಮುಖಂಡರಾದ ವಿಕಾಸ ಕಲಘಟಗಿ, ಕಿರಣ ಜಾಧವ, ಸರಿತಾ ಪಾಟೀಲ, ಪ್ರಕಾಶ ಶಿರೋಳಕರ ಭಾಗವಹಿಸಿದ್ದರು.

ನಗರದಾದ್ಯಂತ ಹಾಗೂ ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಅಧಿಕಾರಿಗಳು ದ್ವಿಚಕ್ರವಾಹನಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿ, ಸ್ಥಳೀಯರಿಗೆ ಧೈರ್ಯ ತುಂಬಿದರು.

ಮೆರವಣಿಗೆ, ರೂಪಕಗಳನ್ನು ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ತಡರಾತ್ರಿವರೆಗೂ ಮೆರವಣಿಗೆ ಮುಂದುವರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.