ಭಾನುವಾರ, ಏಪ್ರಿಲ್ 2, 2023
33 °C
‘ನಾರಿಶಕ್ತಿ’ ಪ್ರಶಸ್ತಿಗೆ ಭಾಜನವಾದ ದಿಟ್ಟೆ

ಕತ್ತಲಿನಿಂದ ಬೆಳಕಿನತ್ತ ‘ಶೋಭಾ’ಯಮಾನ: ‘ನಾರಿಶಕ್ತಿ’ ಪ್ರಶಸ್ತಿಗೆ ಭಾಜನವಾದ ದಿಟ್ಟೆ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ಒಂದು ಕಾಲದಲ್ಲಿ ದೇವದಾಸಿಯಾಗಿದ್ದ ಮೂಡಲಗಿಯ ಶೋಭಾ ಗಸ್ತಿ ಅವರು ಕತ್ತಲಿನಿಂದ ಬೆಳಕಿನೆಡೆಗೆ ಬಂದಿದ್ದು, ಕೆಟ್ಟ ಸಂಪ್ರದಾಯಕ್ಕೆ ಸಿಲುಕಿದ್ದವರ ಸಬಲೀಕರಣ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎರಡೂವರೆ ದಶಕಗಳಿಂದ ಹೋರಾಡುತ್ತಿದ್ದಾರೆ.

ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2021ನೇ ಸಾಲಿನ ‘ನಾರಿಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದೆ.

‘ನಾನು ಮೂಡಲಗಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 6ನೇ ತರಗತಿಯಲ್ಲಿದ್ದಾಗ ನನ್ನನ್ನು ದೇವರಿಗೆ ಬಿಟ್ಟಿರ್‍ರೀ. ಮುಂದೆ ನಾನು ಪಡಬಾರದ ಕಷ್ಟಗಳನ್ನು ಕಂಡಿದ್ದೇನೆ’ ಎಂದು ತನ್ನ ಬದುಕಿನ ನೋವುಗಳನ್ನು ಬಿಚ್ಚಿಡುವಾಗ ಅವರ ಕಣ್ಣಂಚು ನೀರಾದವು.

ಪುರಸಭೆಯಲ್ಲಿ ಕೂಲಿ ಮಾಡಿಕೊಂಡಿದ್ದ ತಾಯಿ ಶಾರವ್ವ, ತಂದೆ ಸತ್ಯಪ್ಪ ಅವರಿಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು. ಅವರಲ್ಲಿ ಶೋಭಾ ಕೊನೆ ಮಗಳು. ಕಿತ್ತುತಿನ್ನುವ ಬಡತನ ಒಂದೆಡೆಯಾದರೆ 80–90ರ ದಶಕದಲ್ಲಿ ಅತ್ಯಂತ ರೂಢಿಯಲ್ಲಿದ್ದ ಮುತ್ತುಕಟ್ಟುವ ಸಂಪ್ರದಾಯಕ್ಕೆ 10ನೇ ತರಗತಿಯಲ್ಲಿದ್ದಾಗ ಅವರು ಬಲಿಯಾಗಬೇಕಾಯಿತು.

‘ನಾನೊಲ್ಲೆ ಎಂದು ಅತ್ತು, ಎಷ್ಟೇ ಕಿರುಚಾಡಿದರೂ ಸಮಾಜ, ಸಂಪ್ರದಾಯ ನನ್ನನ್ನು ಬಿಡಲಿಲ್ಲರೀ’ ಎಂದು ನೆನಪಿಸಿಕೊಂಡರು. ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ರೀತಿಯಿಂದ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಶೋಭಾ ಅವರಿಗೆ ಕೆಟ್ಟ ಪದ್ದತಿಯು ಉರುಳಾಯಿತು.

‘ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮೈರಾಡ ಸಂಸ್ಥೆಯವರ ಪ್ರೇರಣೆಯ ಫಲವಾಗಿ ನಾನಿಂದು ಮುಖ್ಯವಾಹಿನಿಗೆ ಬಂದಿರುವೆ. ನನ್ನಂತೆ ಬೇರೆ ಹೆಣ್ಣು ಮಕ್ಕಳು ನೋವು ಪಡಬಾರದು ಎಂದು ಅಳಿಲು ಸೇವೆ ಸಲ್ಲಿಸಿಕೊಂಡು ಬಂದಿರುವೆ’ ಎನ್ನುತ್ತಾರೆ.

ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ(ಮಾಸ್‌)ದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ತಡೆ, ಮಹಿಳೆಯರ ಮೇಲಾಗುವ ಅತ್ಯಾಚಾರ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಹೀಗೆ ಹತ್ತು ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2018ರಲ್ಲಿ ‘ಅಮ್ಮಾ’ ಸಂಸ್ಥೆಯ ಕಾರ್ಯದರ್ಶಿಯಾಗಿ ರಾಯಬಾಗ, ಚಿಕ್ಕೋಡಿ, ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ನೊಂದ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿದ್ದಾರೆ. ಜಾಗೃತಿ ಮೂಡಿಸುತ್ತಿದ್ದಾರೆ.

2014ರಲ್ಲಿ ಮೈಸೂರಿನ ಸಂಸ್ಥೆಯೊಂದು ನೀಡುವ ‘ಕರ್ನಾಟಕದ ಕಣ್ಮಣಿ’, ಬೆಂಗಳೂರಿನ ನಿಡುಮಾಮಿಡಿ ಸಂಸ್ಥಾನ ಮಠದ ಪ್ರಶಸ್ತಿ, ಬೆಳಗಾವಿಯ ಬಸವ ಭೀಮ ಸೇನೆಯ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ. 2016ರಲ್ಲಿ ಸಿಂಗಾಪುರ ಮತ್ತು ಅಮೆರಿಕಾದಲ್ಲಿ ನಡೆದ ದೇವದಾಸಿಯರ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 2020ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದೊಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.

‘ಮಗ ಖಾಜಾ ಎಂಬಿಎ ಮಾಡಿಕೊಂಡಿದ್ದು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ, ಮಗಳು ರೇಷ್ಮಾ ಬಿ.ಎಸ್ಸಿ., ಬಿ.ಇಡಿ. ಮಾಡಿದ್ದಾಳೆ’ ಎಂದ ಅವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದರ ಬಗ್ಗೆ ಅಭಿಮಾನಪಡುತ್ತಾರೆ.

ಶೋಭಾ ಅವರು ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 6ನೇ ತರಗತಿಯಲ್ಲಿದ್ದಾಗ ಆಗಿನ ಸಮಾಜವು ದೇವದಾಸಿ ಪಟ್ಟ ಕಟ್ಟಿತ್ತು. ಈಚೆಗೆ ನಾರಿಶಕ್ತಿ ಪ್ರಶಸ್ತಿ ಪಡೆದ ಮೇಲೆ ಅದೇ ಶಾಲೆಯಲ್ಲಿ ತಾಲ್ಲೂಕು ಆಡಳಿತದಿಂದ ಸನ್ಮಾನ ನೆರವೇರಿದ್ದು ಗಮನಾರ್ಹವಾಗಿತ್ತು. ಒಂದೊಮ್ಮೆ ವೇದನೆ ಕೊಟ್ಟಿದ್ದ ಸಮಾಜ ಈಗ ಸಾಧನೆಗೆ ಸನ್ಮಾನ ನೀಡುತ್ತಿದೆ. ಈ ಹಾದಿಯಲ್ಲಿ ಶೋಭಾ ಅವರ ಶ್ರಮ ಅಪಾರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು