ಶುಕ್ರವಾರ, ಮೇ 27, 2022
27 °C

ಕೆಎಲ್‌ಇ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನವಾದ ‘ಶಾಕ್‌ವೇವ್ ಲಿಥೋಟ್ರಿಪ್ಸಿ ಪ್ರಕ್ರಿಯೆ’ ಮೂಲಕ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಚಿಕ್ಕೋಡಿ ತಾಲ್ಲೂಕಿನ ಗ್ರಾಮವೊಂದರ 67 ವರ್ಷದ ವ್ಯಕ್ತಿಯನ್ನು ಈ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ತಕ್ಷಣ ತಪಾಸಣೆ ನಡೆಸಿದ ವೈದ್ಯರು, ಹೃದಯಕ್ಕೆ ರಕ್ತವನ್ನು ಪೂರೈಸುವ ಬಲಬದಿಯ ರಕ್ತನಾಳದಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಂಡು ರಕ್ತ ಸಂಚಾರ ಸ್ಥಗಿತಗೊಂಡು ಜೀವಕ್ಕೆ ಅಪಾಯ ತಂದೊಡ್ಡಿದ್ದನ್ನು ವೈದ್ಯರು ಗುರುತಿಸಿದ್ದರು. ಇದನ್ನು ಸರಿಪಡಿಸಲು ಸ್ಟೆಂಟ್ ಅಳವಡಿಕೆ ಸಾಧ್ಯವಾಗುತ್ತಿರಲಿಲ್ಲ. ಈ ಮೊದಲು ಕೂಡ ರೋಗಿಯ ರಕ್ತನಾಳಗಳಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ಹೀಗಾಗಿ, ರಕ್ತನಾಳದಲ್ಲಿ ಸಂಗ್ರಹವಾಗಿದ್ದ ಕ್ಯಾಲ್ಸಿಯಂ ಅನ್ನು ತಂತ್ರಜ್ಞಾನದ ಮೂಲಕ ಕರಗಿಸಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ತಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ‘ಈ ಪ್ರಕ್ರಿಯೆಯನ್ನು ಉತ್ತರ ಕರ್ನಾಟಕ ಮತ್ತು ಗೋವಾದಲ್ಲಿ ಪ್ರಥಮ ಬಾರಿಗೆ ನೆರವೇರಿಸಿದ ಹೆಮ್ಮೆ ಆಸ್ಪತ್ರೆಯದ್ದು’ ಎಂದು ತಿಳಿಸಿದ್ದಾರೆ.

‘ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ’ ಎಂದು ಡಾ.ಸುರೇಶ ಪಟ್ಟೇದ ತಿಳಿಸಿದ್ದಾರೆ.

ಪಟ್ಟೇದ ಅವರೊಂದಿಗೆ ಡಾ.ಸುಹಾಸಿನಿ ಅಥರ್ಗಾ, ಡಾ.ವಿಜಯ ಮೆಟಗುಡಮಠ, ಡಾ.ಸಂಜಯ ಪೋರವಾಲ, ಡಾ.ಸಮೀರ ಅಂಬರ, ಡಾಪ್ರಸಾದ ಎಂ.ಆರ್., ಡಾ.ವಿಶ್ವನಾಥ ಹೆಸರೂರ ಹಾಗೂ ಡಾ.ಅನೂಪ ಹಂಚಿನಾಳ ಕಾರ್ಯನಿರ್ವಹಿಸಿದರು. ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.