ಸೋಮವಾರ, ಜನವರಿ 24, 2022
29 °C
ಪ್ರವೇಶಾತಿ ಸಂಖ್ಯೆ ಹೆಚ್ಚಾಯ್ತು, ಸೌಲಭ್ಯ ವೃದ್ಧಿಯಾಗಲಿಲ್ಲ!

ಸೀಟು ಕಳೆದುಕೊಳ್ಳುವ ಭೀತಿಯಲ್ಲಿ ಬಿಮ್ಸ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್‌)ಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕ ಸಿಬ್ಬಂದಿ ಮೊದಲಾದ ಸೌಲಭ್ಯಗಳ ಕೊರತೆ ಎದುರಾಗಿದ್ದು, ಸೀಟುಗಳನ್ನು ಕಳೆದುಕೊಳ್ಳುವ ಭೀತಿ ಉಂಟಾಗಿದೆ.

ಇಲ್ಲಿ ಕಾಲೇಜು ಆರಂಭವಾದಾಗ 100 ಸೀಟುಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದನ್ನು 2017–18ನೇ ಸಾಲಿನಿಂದ 150ಕ್ಕೆ ಏರಿಸಲಾಗಿದೆ. ಅದಕ್ಕೆ ತಕ್ಕಂತೆ, ಸೌಲಭ್ಯಗಳನ್ನು ನೀಡುವುದು ಸರ್ಕಾರದಿಂದ ಸಾಧ್ಯವಾಗಿಲ್ಲ. ಇದು ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿದೆ.

ಮೂರು ವರ್ಷಗಳಿಂದಲೂ ಸುಧಾರಣೆ ಆಗದಿರುವುದನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಬೋಧಕ ಹುದ್ದೆಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಲ್ಲದಿದ್ದಲ್ಲಿ, ಲಭ್ಯವಿರುವ ಸೌಲಭ್ಯಗಳಿಗೆ ತಕ್ಕಂತೆ ಬರೋಬ್ಬರಿ 50 ಸೀಟು ಕಡಿತಗೊಳ್ಳುವ ಸಾಧ್ಯತೆಯ ಸಂದೇಶವನ್ನೂ ರವಾನಿಸಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ, ಈ ಸರ್ಕಾರಿ ಕಾಲೇಜುಗಳಲ್ಲಿ 50 ಪ್ರತಿಭಾವಂತ ಬಡ–ಮಧ್ಯಮ ವರ್ಗದ ವಿದ್ಯಾರ್ಥಿಗಳು ಸೀಟುಗಳಿಂದ ವಂಚಿತವಾಗಬೇಕಾಗುತ್ತದೆ ಎನ್ನುವ ಆತಂಕ ಮನೆ ಮಾಡಿದೆ.

ಮಾರ್ಗಸೂಚಿ ಪಾಲಿಸಬೇಕು:

ಈ ಕಾಲೇಜಿಲ್ಲಿ 100 ಸೀಟುಗಳಿಗೆ 224 ಬೋಧಕ ಹುದ್ದೆಗಳು ಇವೆ. ಈ ಸಂಖ್ಯೆಯು 150 ವಿದ್ಯಾರ್ಥಿಗಳಿಗೆ ತಕ್ಕಂತೆ 260ಕ್ಕೆ ಹೆಚ್ಚಾಗಬೇಕಿತ್ತು. 31 ಸಹ ಪ್ರಾಧ್ಯಾಪಕರ ಹುದ್ದೆಗಳಷ್ಟೆ ಮಂಜೂರಾಗಿದ್ದು, 43 ಮಂದಿ ಬೇಕಾಗಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು 54 ಮಾತ್ರ ಇವೆ. ಬೇಕಾಗಿರುವುದು 71. ಹಿರಿಯ ನಿವಾಸಿ ವೈದ್ಯರು ಹುದ್ದೆಗಳು 26 ಮಂಜೂರಾಗಿವೆ. ಇನ್ನೂ 13 ಹೆಚ್ಚುವರಿಯಾಗಿ ಅಗತ್ಯವಾಗಿದೆ. ಇದಲ್ಲದೇ, ನರ್ಸಿಂಗ್‌, ಗ್ರೂಪ್‌ ಡಿ, ವಾರ್ಡ್‌ ಬಾಯ್‌ ಹಾಗೂ ಆಯಾಗಳು ಕೂಡ ಇರಬೇಕಾಗುತ್ತದೆ. ಆಯೋಗದ ಮಾರ್ಗಸೂಚಿ ಪಾಲಿಸಭೇಕಾಗುತ್ತದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ಮುಖ್ಯವಾಗಿ ಬೋಧಕ ಸಿಬ್ಬಂದಿ ಲಭ್ಯತೆಯನ್ನು ಗಮನಿಸುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಆ ಹುದ್ದೆಗಳು ಭರ್ತಿಯಾಗಿರಬೇಕು ಮತ್ತು ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದನ್ನು ಪರಿಗಣಿಸುತ್ತದೆ. ಸರಾಸರಿ ಶೇ 10ರಷ್ಟು ಕೊರತೆ ಇದ್ದರೆ ನಿರ್ವಹಿಸಬಹುದು. ಆದರೆ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಇರುವುದನ್ನು ಬಹಳ ವರ್ಷಗಳವರೆಗೆ ಸಹಿಸುವುದಿಲ್ಲ. ಆದ್ದರಿಂದ, ಮಂಜೂರಾಗಿರುವ ಸೀಟುಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗಮನಸೆಳೆದ ಶಾಸಕ:

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈಚೆಗೆ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಅನಿಲ ಬೆನಕೆ, ಬಿಮ್ಸ್‌ ಕಾಲೇಜಿನಲ್ಲಿರುವ ಕೊರತೆಗಳ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರ ಗಮನಸೆಳೆದಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಪ್ರಾಯೋಗಿಕ ತರಬೇತಿ ನಿಟ್ಟಿನಲ್ಲಿ ಅಗತ್ಯ ಬೋಧಕ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಸೀಟುಗಳು ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.

‘ಸಂಸ್ಥೆಯಲ್ಲಿ ಬೋಧಕ ಸಿಬ್ಬಂದಿ ಕೊರತೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಪ್ರಸ್ತಾವವನ್ನೂ ಸಲ್ಲಿಸಲಾಗಿದೆ. ಮಂಜೂರಾತಿ ಆಗಿಲ್ಲವಾದ್ದರಿಂದ ನೇಮಕ ಪ್ರಕ್ರಿಯೆ ನಡೆದಿಲ್ಲ. ಕಾಲೇಜಿನಲ್ಲಿ ಪ್ರತಿ ವರ್ಷ 150 ಸೀಟುಗಳ ಭರ್ತಿಗೆ ಅವಕಾಶವಿದೆ. ಅದಕ್ಕೆ ತಕ್ಕಂತೆ ಹುದ್ದೆಗಳು ಬೇಕಾಗುತ್ತವೆ. ಇದರಿಂದ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ’ ಎಂದು ನಿರ್ದೇಶಕ ಡಾ.ಆರ್‌.ಜಿ. ವಿವೇಕಿ ಪ್ರತಿಕ್ರಿಯಿಸಿದರು.

ಪತ್ರ ಬರೆಯಲಾಗಿದೆ

ಬಿಮ್ಸ್‌ನಲ್ಲಿ ನಿವೃತ್ತಿ ಮೊದಲಾದ ಕಾರಣಗಳಿಂದ ಖಾಲಿಯಾದ ಭರ್ತಿಗಳನ್ನು ತುಂಬುವಂತೆಯೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಂಡು ನಿರ್ವಹಿಸುತ್ತಿದ್ದೇವೆ.

–ಡಾ.ಆರ್‌.ಜಿ. ವಿವೇಕಿ, ನಿರ್ದೇಶಕರು, ಬಿಮ್ಸ್

ಸಚಿವರನ್ನು ಕೋರಿದ್ದೇನೆ

ಬಿಮ್ಸ್ ಕಾಲೇಜಿನಲ್ಲಿರುವ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದೇನೆ. ಸೀಟುಗಳು ಕಡಿತ ಆಗದಂತೆ ನೋಡಿಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಕೋರಿದ್ದೇನೆ.

–ಅನಿಲ ಬೆನಕೆ, ಶಾಸಕರು, ಉತ್ತರ ಮತಕ್ಷೇತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು