ಗೋಕಾಕ: ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರ ನಡೆಸಿದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಖು. ರಾಜ್ಯದ ಜನಸಂಖ್ಯೆಯಲ್ಲಿ ಶೇ 85ರಷ್ಟಿರುವ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಅಹಿಂದ ಚೇತನ ಸಂಘಟನೆಯ ಸದಸ್ಯರು ಬುಧವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
2016ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ₹180 ಕೋಟಿ ವ್ಯಯಿಸಿ ಮಾಡಲಾಗಿದೆ. ಸಚಿವ ಸಂಪುಟದ ಮಟ್ಟದಲ್ಲಿ ಅವರವರ ಜಾತಿಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಆದರೆ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದರೂ ಬಿಡುಗಡೆಗೊಳಿಸಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಜಾತಿ ಗಣತಿ ಬಿಡುಗಡೆ ಮಾಡುವಂತೆ ಒತ್ತಾಯಿಸುವವರು ಒಂದೆಡೆಯಾದರೆ, ವರದಿ ಬಿಡುಗಡೆ ಮಾಡಕೂಡದು ಎಂದು ಕೆಲವರು ವಿರೋಧ ಮಾಡುತ್ತಿದ್ದಾರೆ. ಇದು ವಿಪರ್ಯಾಸದ ಸಂಗತಿ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿಯ ಬಿಡುಗಡೆ ಮಾಡುವುದರಿಂದ ಜಾತಿಗಳ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳ ಬಗ್ಗೆ ರಾಜ್ಯದ ಜನರು ತಿಳಿಯುತ್ತದೆ. ಸಮುದಾಯಗಳ ಅಭಿವೃದ್ಧಿಗೆ ಕೈಗನ್ನಡಿ ಸಿಗಲಿದೆ ಎಂದೂ ತಿಳಿಸಿದ್ದಾರೆ.
ಸಂಪೂರ್ಣ ಸಮೀಕ್ಷೆಯನ್ನು ಸರ್ಕಾರವೇ ಮಾಡಿದೆ. ಗಣತಿ ಕಾರ್ಯದಲ್ಲಿ ಎಲ್ಲ ಜಾತಿ ಮತ್ತು ಸಮುದಾಯಕ್ಕೆ ಸೇರಿದವರು ತೊಡಗಿಸಿಕೊಂಡಿದ್ದರು. ಇಲ್ಲಿ ಯಾರ ಪರ ಅಥವಾ ವಿರೋಧ ಸಮೀಕ್ಷೆ ಬರಲು ಸಾಧ್ಯವೇ ಇಲ್ಲ. ಹಾಗಿದ್ದ ಮೇಲೂ ಏಕೆ ವಿರೋಧಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ, ಇನ್ನೂ ಹೆಚ್ಚಿನ ವಿಳಂಬ ಮಾಡದೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕು. ಕೇಂದ್ರಕ್ಕೆ ಸಲ್ಲಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವಿನಾಯಕ ಕಟ್ಟಿಕರ, ಮುಖಂಡರಾದ ಲಕ್ಷ್ಮಣ ಮಸಗುಪ್ಪಿ, ಮಲಿಕ್ ಹುಣಶ್ಶಾಳ್, ವಿಠ್ಠಲ ಮುರ್ಕಿಭಾವಿ, ಬಸವರಾಜ ಸರ್ವರ, ಮಾಳಪ್ಪ ಮಾರಾಪುರ, ಸಿದ್ದು ಮರಡಿ, ಗೋಪಾಲ ದಳವಾಯಿ ಮೊದಲಾದ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಪಟ್ಟು ವಿರೋಧಿಸುವವರ ಮೇಲೆ ಕಿಡಿ ಸರ್ಕಾರದ ವಿಳಂಬ ಧೋರಣೆಗೆ ಬೇಸರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.