ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಲಿಂಗರಾಜರು

ತ್ಯಾಗವೀರ ಸಿರಸಂಗಿ ಲಿಂಗರಾಜು ಕಾಲೇಜು ರಸ್ತೆ ನಾಮಕರಣ
Last Updated 2 ಅಕ್ಟೋಬರ್ 2021, 16:27 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾದಾನಿ ಸಿರಸಂಗಿ ಲಿಂಗರಾಜರು ನಾಡು ಕಂಡ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಶಿಕ್ಷಣಕ್ಕಾಗಿ ತಮ್ಮ ಸಮಸ್ತ ಸಂಪತ್ತನ್ನೂ ಸಮಾಜಕ್ಕೆ ದಾನ ಮಾಡಿದರು. ಅವರ ಹೆಸರನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ಕಾಲೇಜು ರಸ್ತೆಗೆ ಇಟ್ಟಿರುವುದು ಔಚಿತ್ಯಪೂರ್ಣವಾಗಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಶನಿವಾರ ಆಯೋಜಿಸಿದ್ದ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

‘ಇಂದಿನ ಯುವ ಜನತೆಗೆ ಲಿಂಗರಾಜರ ಜೀವನಗಾಥೆಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಈ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಆಸ್ತಿಯನ್ನೆಲ್ಲಾ ದಾಸೋಹ ಮಾಡಿದರು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಮೆ.ಜಾಕ್ಸನ್ ಅವರಿಗೆ ಮೃತ್ಯುಪತ್ರವನ್ನು ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಅವರು ಅಂದು ಸ್ಥಾಪಿಸಿದ ಸಿರಸಂಗಿ ನವಲಗುಂದ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ನೀಡಿತು. ಲಿಂಗರಾಜರ ಶಿಷ್ಯವೇತನದಿಂದ ಬಹಳಷ್ಟು ಮಂದಿ ಮಹಾನ್‌ ವ್ಯಕ್ತಿಗಳಾಗಿ ಹೊರಹೊಮ್ಮಿದರು. ಸಮಸ್ತ ನಾಡು ಅವರ ದಾನವನ್ನು ಸ್ಮರಿಸುತ್ತಿದೆ’ ಎಂದರು.

‘ಲಿಂಗರಾಜರ ಹೆಸರನ್ನು ಕಾಲೇಜು ರಸ್ತೆಗೆ ಇಡಬೇಡಬೇಕು ಎನ್ನುವುದು ಜನತೆಯ ಬಹುದಿನಗಳ ಕನಸಾಗಿತ್ತು. ಜನರೂಢಿಯಲ್ಲಿ ಪದಬಳಕೆ ಇದ್ದರೂ ಆಡಳಿತಾತ್ಮಕವಾಗಿ, ಕಾಗದ ಪತ್ರ ವ್ಯವಹಾರಗಳಲ್ಲಿ ಕಾಲೇಜು ರಸ್ತೆ ಎಂದು ಮಾತ್ರ ಬಳಕೆಯಲ್ಲಿತ್ತು. ಈಗ ಅಧಿಕೃತವಾಗಿ ನಾಮಕರಣ ಮಾಡಿರುವುದು ಸಂತೋಷ ಹಾಗೂ ಹೆಮ್ಮೆ ತಂದಿದೆ’ ಎಂದು ಹೇಳಿದರು.

ಫಲಕ ಅನಾವರಣಗೊಳಿಸಿದ ಸಂಸದೆ ಮಂಗಲಾ ಅಂಗಡಿ, ‘ಲಿಂಗರಾಜರಿಗೆ ನಾವು ಸಲ್ಲಿಸುತ್ತಿರುವ ಗೌರವದ ಪ್ರತೀಕ ಇದಾಗಿದೆ. ಅವರ ಆದರ್ಶ ನಡೆ ನಮ್ಮ ಪಥವಾಗಲಿ. ಪ್ರಭಾಕರ ಕೋರೆ ಅವರ ಪರಿಶ್ರಮದ ಫಲವಾಗಿ, ರಸ್ತೆಗೆ ಒಬ್ಬ ಮಹಾನ್ ದಾನಿಯ ಹೆಸರು ನಾಮಕರಣ ಮಾಡಿರುವುದು ಅಭಿಮಾನದ ಸಂಗತಿ’ ಎಂದರು.

ಶಾಸಕ ಅನಿಲ ಬೆನಕೆ, ‘ಲಿಂಗರಾಜರು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಲಿಂಗರಾಜರು ಸ್ಥಾಪಿಸಿದ ನವಲಗುಂದ ಶಿಕ್ಷಣ ಟ್ರಸ್ಟ್‌ನಲ್ಲಿ ₹ 13 ಕೋಟಿ ಇದ್ದು, ಇಂದಿಗೂ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದು ತಿಳಿಸಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ದೇಸಾಯಿ, ಆಜೀವ ಸದಸ್ಯರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT