ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಾ: ಹೊಸ ಯೋಜನೆಗಳಿಗೆ ₹ 250 ಕೋಟಿ

Last Updated 31 ಮಾರ್ಚ್ 2022, 15:16 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ 2022–23ನೇ ಸಾಲಿನ ₹ 1.50 ಕೋಟಿ ಉಳಿತಾಯ ಬಜೆಟ್‌ ಅನ್ನು ಗುರುವಾರ ಮಂಡಿಸಲಾಯಿತು.

ಈ ಸಾಲಿನಲ್ಲಿ ವಿವಿಧ ಮೂಲಗಳಿಂದ ₹ 492.08 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಮತ್ತು ₹ 490.58 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಾಧಿಕಾರದ ಅಧ್ಯಕ್ಷ ಸಂಜಯ ಬೆಳಗಾಂವಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಪ್ರೀತಂ ನಸಲಾಪುರೆ ಮಂಡಿಸಿದರು. ವಿಶೇಷ ಯೋಜನೆಗಳಿಗೆಂದು ₹ 100 ಕೋಟಿ ತೆಗೆದಿರಿಸಲಾಗಿದೆ ಮತ್ತು ಕಣಬರ್ಗಿಯಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ (ಸ್ಕೀಂ ನಂ.61) ಅನುಷ್ಠಾನಕ್ಕಾಗಿ ₹ 150 ಕೋಟಿ ಮೀಸಲಿಡಲಾಗಿದೆ. ಇದರೊಂದಿಗೆ ಹೊಸ ಯೋಜನೆಗಳಿಗೆ ಒಟ್ಟು ₹ 250 ಕೋಟಿ ಇಡಲಾಗಿದೆ. ಸದ್ಯ ಪ್ರಾಧಿಕಾರದಿಂದಲೇ ನಿರ್ವಹಿಸಲಾಗುತ್ತಿರುವ ರಾಮತೀರ್ಥನಗರ ಬಡಾವಣೆ ಅಭಿವೃದ್ಧಿಗೆ ಹಣ ಕಾಯ್ದಿರಿಸಲಾಗಿದೆ. ಅಲ್ಲಿ ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಮೊದಲಾದ ಕೆಲಸಕ್ಕೆ ಯೋಜಿಸಲಾಗಿದೆ.

ಮನೆ ತೆರಿಗೆ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಉತ್ತಮತೆ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ದಂಡ, ಪರಿಶೀಲನಾ ಶುಲ್ಕ, ಉಪ ವಿಭಜನೆ ಶುಲ್ಕ, ನವೀಕರಣ ಶುಲ್ಕ, ನಿವೇಶನಗಳ ಹರಾಜು, ಖಾಸಗಿ ರೂಪುರೇಖೆಯಿಂದ ಅಭಿವೃದ್ಧಿ ಹಾಗೂ ಮೇಲ್ವಿಚಾರಣೆ, ಅರ್ಜಿಗಳು, ಟೆಂಡರ್‌ ಅರ್ಜಿಗಳು, ಸಮುದಾಯ ಭವನ ಕಟ್ಟಡಗಳ ಬಾಡಿಗೆ, ವಿಳಂಬ ಖಾತೆಯಿಂದ ಬಂದ ಬಡ್ಡಿ ಹಾಗೂ ಇತರೆ ಮೂಲಗಳಿಂದ ಆದಾಯ ನಿರೀಕ್ಷೆ ಹೊಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‌‘ಸುವರ್ಣ ವಿಧಾನಸೌಧದ ಸುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ಹಸಿರುವಲಯ ಎಂದು ಘೋಷಿಸುವಂತೆ ಈ ಹಿಂದೆ ಯೋಜಿಸಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ 500 ಮೀಟರ್‌ ವ್ಯಾಪ್ತಿಯನ್ನಷ್ಟೆ ಪರಿಗಣಿಸುವಂತೆ ಸರ್ಕಾರವನ್ನು ಕೋರಿ ಪ್ರಸ್ತಾವ ಸಲ್ಲಿಸುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ತಿಳಿದುಬಂದಿದೆ.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಹಾನಗರಪಾಲಿಕೆ ಆಯುಕ್ತ ರುದ್ರೇಶ್‌ ಘಾಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT