ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯುವ ಹಳ್ಳ: ಅಕ್ಷರ ಕಲಿಕೆಗೆ ಮಕ್ಕಳ ಹರಸಾಹಸ

Published 11 ಜೂನ್ 2024, 23:49 IST
Last Updated 11 ಜೂನ್ 2024, 23:49 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ಮಳೆ ಬಂದರೆ ಎಲ್ಲರಿಗೂ ಸಂಭ್ರಮ. ಆದರೆ, ತಾಲ್ಲೂಕಿನ ಲಕ್ಷ್ಮಿನಗರದ ಗ್ರಾಮದ ಮಕ್ಕಳಿಗೆ ಇದು ಸಂಕಟ. ಪ್ರತಿ ಮಳೆಗಾಲದಲ್ಲೂ ಈ ಗ್ರಾಮ ನಡುಗಡ್ಡೆ ಆಗುತ್ತದೆ.

‌ಲಕ್ಷ್ಮಿ ನಗರದಲ್ಲಿ ಪ್ರಾಥಮಿಕ ಶಾಲೆ ಇಲ್ಲ. ಹೀಗಾಗಿ ಅಲ್ಲಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ 2 ಕಿ.ಮೀ ನಡೆದು ಪಕ್ಕದ ಉಡಚಮ್ಮನಗರ ಗ್ರಾಮಕ್ಕೆ ಹೋಗಬೇಕು. ಮಳೆ ಬಂದಾಗಲೆಲ್ಲ ಹರಿಯುವ ಸತ್ಯಮ್ಮನ ಹಳ್ಳವನ್ನು ಸುರಕ್ಷಿತವಾಗಿ ದಾಟಿಕೊಂಡು, ಮಕ್ಕಳು ಶಾಲೆಗೆ ತಲುಪಬೇಕು. ಇದು ಅನಿವಾರ್ಯ.

‘ಹಳ್ಳದ ಹರಿವು ಹೆಚ್ಚಾದರೆ ಶಾಲೆಗೆ ರಜೆ ಮಾಡಬೇಕು. ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳು ಮರಳಿ ಮನೆಗೆ ಬರುವವರೆಗೂ ಸಮಾಧಾನ ಇರಲ್ಲ. ಎಷ್ಟೋ ಸಲ ಮಕ್ಕಳು ಹಳ್ಳದ ಆಚೆ ದಡದಲ್ಲಿ ರಾತ್ರಿಯಿಡೀ ಕೂತು, ಹಳ್ಳದಲ್ಲಿ ನೀರು ಹರಿಯುವಿಕೆ ಕಡಿಮೆಯಾದ ಬಳಿಕ ಮನೆಗೆ ಮರಳಿದ್ದಾರೆ. ಹಲವು ಸಲ ಪೋಷಕರೇ, ಮಕ್ಕಳನ್ನು ಎತ್ತಿಕೊಂಡು ಪ್ರಯಾಸದಿಂದ ಹಳ್ಳ ದಾಟಿಸಿದ್ದಾರೆ. ಹಳ್ಳ ಹರಿದಾಗಲೆಲ್ಲ, ಗ್ರಾಮವು ನಡುಗಡ್ಡೆಯಾಗುತ್ತದೆ’ ಎಂದು ಲಕ್ಷ್ಮಿನಗರದ ಗ್ರಾಮಸ್ಥರು ತಿಳಿಸಿದರು.

‘ಕಂದಾಯ ಗ್ರಾಮವಾಗದ ಲಕ್ಷ್ಮಿನಗರದಲ್ಲಿ 40 ಕುಟುಂಬಗಳು ವಾಸ ಇವೆ. 30 ಮಕ್ಕಳು ಶಾಲೆಗೆ ಹೋಗುತ್ತಾರೆ. ಸಂಗಳ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ರಸ್ತೆ, ಸೇತುವೆ, ಬಸ್ ಸೌಲಭ್ಯ ಸೇರಿದಂತೆ ಯಾವುದನ್ನೂ ಕಲ್ಪಿಸಲಾಗಿಲ್ಲ’ ಎಂದು ಅವರು ದೂರಿದರು.

‘ಈ ಹಿಂದಿನ ಶಾಸಕ ಮಹಾದೇವಪ್ಪ ಯಾದವಡ ಅವರು ಸೇತುವೆ ನಿರ್ಮಿಸಲಿಲ್ಲ. ಹಾಲಿ ಶಾಸಕ ಅಶೋಕ ಪಟ್ಟಣ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಿದ್ದೆವು. ಆದರೆ, ಸೇತುವೆ ನಿರ್ಮಿಸಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದರು. ನಾವು ಮತದಾನ ಮಾಡಿದೆವು. ಆದರೆ, ಮಹತ್ವದ ಬದಲಾವಣೆಗಳೇನೂ ಆಗಿಲ್ಲ’ ಎಂದರು.ಸಂಗಳ ಗ್ರಾಮ ಪಂಚಾಯಿತಿಯಡಿ ಉದ್ಯೋಗ ಖಾತ್ರಿ ಮೂಲಕ ಹಳ್ಳಕ್ಕೆ ಬಾಂದಾರ ನಿರ್ಮಿಸುವ ಉದ್ದೇಶವಿದೆ. ಶೀಘ್ರ ಕಾಮಗಾರಿ ಆರಂಭಿಸಿ ಸಮಸ್ಯೆ ಬಗೆ ಹರಿಸಲಾಗುವುದು

ಮಳೆ ಬಂದಾಗಲೆಲ್ಲ ನಮ್ಮೂರು ನಡುಗಡ್ಡೆ ಆಗುತ್ತದೆ. ಹೊಲಕ್ಕೆ ಹೋಗಿ ಬರಲು ದಾರಿಯೇ ಇಲ್ಲ. ಇದರಿಂದ ಕೃಷಿ ಚಟುವಟಿಕೆ ಜೀವನೋಪಾಯಕ್ಕೆ ಸಂಕಷ್ಟವಾಗಿದೆ.
–ನಾಗಪ್ಪ ಅಡಗಲ್ ಲಕ್ಷ್ಮಿನಗರ ನಿವಾಸಿ
ಸಂಗಳ ಗ್ರಾಮ ಪಂಚಾಯಿತಿಯಡಿ ಉದ್ಯೋಗ ಖಾತ್ರಿ ಮೂಲಕ ಹಳ್ಳಕ್ಕೆ ಬಾಂದಾರ ನಿರ್ಮಿಸುವ ಉದ್ದೇಶವಿದೆ. ಶೀಘ್ರ ಕಾಮಗಾರಿ ಆರಂಭಿಸಿ ಸಮಸ್ಯೆ ಬಗೆ ಹರಿಸಲಾಗುವುದು
–ಬಸವರಾಜ ಐನಾಪುರ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ ರಾಮದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT