ಬುಧವಾರ, ಸೆಪ್ಟೆಂಬರ್ 22, 2021
24 °C

‘ಟ್ರೀ ಪಾರ್ಕ್‌’ಉಳಿಸಿಕೊಳ್ಳಲು ಹರಸಾಹಸ; ಲಭ್ಯವಿರುವ ಅಲ್ಪ ನೀರಿನಿಂದಲೇ ಸಸಿ ಪಾಲನೆ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಪಟ್ಟಣದ ಪಶ್ಚಿಮ ದಿಕ್ಕಿನ ಹೊರವಲಯದ ಗುಡ್ಡದಲ್ಲಿ ಮೂರು ವರ್ಷಗಳಿಂದ ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಟ್ರೀ ಪಾರ್ಕ್‌ನಲ್ಲಿ ನೆಟ್ಟಿರುವ ಸಸಿಗಳಿಗೂ ಬರಗಾಲದ ಬಿಸಿ ತಾಕಿದೆ. ಇಲಾಖೆಯವರು, ಲಭ್ಯವಿರುವ ಅಲ್ಪ ನೀರಿನಿಂದಲೇ ಅವುಗಳನ್ನು ಬದುಕಿಕೊಳ್ಳಲು ಯತ್ನಿಸುತ್ತಿದ್ದಾರೆ.

ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಜೀವನಗರದ ಎದುರಿಗೆ ಇರುವ ಗುಡ್ಡದ 35 ಎಕರೆ ಪ್ರದೇಶದಲ್ಲಿ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಬೇವು, ನೇರಲ, ಆಲ, ಅರಳಿ, ಬಸರಿ, ಸೀತಾಫಲ, ಅತ್ತಿ, ಹೊಂಗೆ ಸೇರಿದಂತೆ ವಿವಿಧ ಜಾತಿಯ 3ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

ಸಸಿಗಳನ್ನು ಬದುಕಿಸಿಕೊಳ್ಳಲು ನೀರಿಗಾಗಿ ಬೋರ್‌ವೆಲ್‌ ಕೊರೆಯಲಾಗಿದೆ. ಪೈಪ್‌ಗಳ ಮೂಲಕ ಸಸಿಗಳಿಗೆ ನೀರು ಕೊಡಲಾಗುತ್ತಿದೆ. ನೀರಿನ ಕೊರತೆಯಿಂದಾಗಿ ಕೆಲವು ಸಸಿಗಳು ಒಣಗಿದ್ದೂ ಉಂಟು.

2017ರ ಸೆಪ್ಟೆಂಬರ್‌ನಿಂದ ಟ್ರೀ ಪಾರ್ಕ್‌ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದು ಐದು ವರ್ಷದ ಯೋಜನೆಯಾಗಿದೆ. ಅರಣ್ಯ ಇಲಾಖೆಯ ಒಟ್ಟು ₹ 1.40 ಕೋಟಿ ಅನುದಾನದಡಿ ‘ಚಿಕ್ಕೋಡಿ ಸಸ್ಯೋದ್ಯಾನ’ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿನ ಪುರಸಭೆ ಮತ್ತು ವಿವಿಧ ಇಲಾಖೆಗಳ ಅನುದಾನದಡಿಯೂ ಈ ಸಸ್ಯೋದ್ಯಾನದಲ್ಲಿ ಇತರ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳುವ ಗುರಿ ಹೊಂದಲಾಗಿದೆ.

‘ರಾಜ್ಯ ಸರ್ಕಾರ ಅರಣ್ಯ ಇಲಾಖೆಯಿಂದ ಪಟ್ಟಣದಲ್ಲಿ ಕೈಗೆತ್ತಿಕೊಂಡಿರುವ ಟ್ರೀ ಪಾರ್ಕನ್ನು ಮೂರು ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಇದುವರೆಗೆ 3ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗಿದೆ. ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ₹ 4 ಲಕ್ಷ ವೆಚ್ಚದಲ್ಲಿ ಬೋರ್‌ವೆಲ್‌ ಕೊರೆಸಲಾಗಿದೆ. ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲಾಗಿದೆ. ಅಲ್ಲಿ ದೊರೆಯುವ ನೀರನ್ನು ಸಸಿಗಳಿಗೆ ಉಣಿಸಲಾಗುತ್ತಿದೆ. ಸಸಿಗಳಿಗೆ ನೀರುಣಿಸಲು ₹ 1.5 ಲಕ್ಷ ವೆಚ್ಚದಲ್ಲಿ ಪೈಪ್‌ ವ್ಯವಸ್ಥೆ ಮಾಡಲಾಗಿದ್ದು, ಅದರ ಮೂಲಕ ನೀರು ಕೊಡಲಾಗುತ್ತಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮೃತ್ಯುಂಜಯ ಬಿ.ಗಣಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ರೀ ಪಾರ್ಕ್‌ ಪ್ರವೇಶ ದ್ವಾರ ನಿರ್ಮಾಣಗೊಂಡಿದ್ದು, ಸುತ್ತ ತಂತಿ ಬೇಲಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಕ್ಕಳು ಆಟವಾಡಲು ವಿವಿಧ ಆಟದ ಸಲಕರಣೆಗಳನ್ನು ₹ 4 ಲಕ್ಷ ವೆಚ್ಚದಲ್ಲಿ ಅಳವಡಿಸಿ ‘ಚಿಲ್ಡ್ರನ್‌ ಪಾರ್ಕ್‌’ ನಿರ್ಮಿಸಲಾಗುತ್ತಿದೆ. ಯುವಕರು ಮತ್ತು ಹಿರಿಯ ನಾಗರಿಕರಿಗಾಗಿ ಪುರಸಭೆ ಮುಕ್ತ ವ್ಯಾಯಾಮಶಾಲೆ ನಿರ್ಮಿಸುತ್ತಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು