ಬುಧವಾರ, ಅಕ್ಟೋಬರ್ 21, 2020
26 °C
ಆರ್‌ಸಿಯು ವಿರುದ್ಧ ವಿದ್ಯಾರ್ಥಿನಿ, ಪೋಷಕ ಆಕ್ರೋಶ

ಚಿನ್ನದ ಪದಕ ನೀಡದೆ ಅಪಮಾನ: ರಾಜ್ಯಪಾಲರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರ‍್ಯಾಂಕ್‌ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲಿಗೆ ಬಿಡಿಗಾಸು ಕೊಟ್ಟು ಅಪಮಾನಿಸಿರುವ ರಾಣಿ ಚನ್ನಮ್ಮ  ವಿಶ್ವವಿದ್ಯಾಲಯ(ಆರ್‌ಸಿಯು)ದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇವೆ’ ಎಂದು ವಿದ್ಯಾರ್ಥಿನಿ ಸೃಷ್ಟಿ ಗ್ಯಾನಿ ಮತ್ತು ಅವರ ತಂದೆ ಗುರು ಅಮರೇಂದ್ರ ಗ್ಯಾನಿ ಇಲ್ಲಿ ತಿಳಿಸಿದರು.

‘ಪದಕ ಬದಲಿಗೆ ₹ 1,070 ಮೊತ್ತದ ಡಿಡಿ ಕೊಡಲಾಗಿದೆ. ಶೈಕ್ಷಣಿಕ ಸಾಧನೆಯನ್ನು ಹಣದಲ್ಲಿ ಅಳೆಯುವುದು ಎಷ್ಟರ ಮಟ್ಟಿಗೆ ಸರಿ? ಆರ್‌ಸಿಯುನ ಈ  ಕ್ರಮದಿಂದ ಬಹಳ ನೋವಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಪುತ್ರಿ ಸೃಷ್ಟಿ ಬಿ.ಎ. ಅಪರಾಧ ವಿಜ್ಞಾನ ಮತ್ತು ಅಪರಾಧ ನ್ಯಾಯಿಕ ವಿಷಯದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಆಕೆಗೆ ಚಿನ್ನದ ಪದಕ ಘೋಷಿಸಲಾಗಿತ್ತು. ಈಚೆಗೆ ನಡೆದ ಘಟಿಕೋತ್ಸವ ಬಳಿಕ ಡಿಡಿ ನೀಡಿದ್ದಾರೆ. ಇತರ ವಿಭಾಗಗಳಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೂ ಹೀಗೆಯೇ ಮಾಡಲಾಗಿದೆ. ಈ ಬಗ್ಗೆ ಕುಲಪತಿಯನ್ನು ಪ್ರಶ್ನಿಸಿದರೆ, ‘ಡಿಡಿ ತೆಗೆದುಕೊಳ್ಳಿ. ಇಲ್ಲವೇ ಕಾನೂನು ಹೋರಾಟ ಮಾಡಿ’ ಎಂದು ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿದರು. ಹೀಗಾಗಿ,  ವಿಷಯವನ್ನು ಪ್ರಧಾನಿ ಗಮನಕ್ಕೂ ತರಲಿದ್ದೇವೆ. ಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಅತಿ ಹೆಚ್ಚು ಅಂಕ ಗಳಿಸಿದ್ದಕ್ಕೆ ಬಂಗಾರದ ಪದಕ ಪಡೆಯುವುದಕ್ಕೂ, ಹಣ ತೆಗೆದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಚಿನ್ನದ ಪದಕ ಗಳಿಸಬೇಕು ಎನ್ನುವುದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ, ಆರ್‌ಸಿಯು ನಮ್ಮಂತಹ ‍ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ತಣ್ಣೀರೆರಚಿದೆ’ ಎಂದು ಸೃಷ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಔಚಿತ್ಯಪೂರ್ಣವಲ್ಲವೆಂದು...

‘ವಿವಿಯು ಸುವರ್ಣ ಪದಕಗಳನ್ನು ಪ್ರಾಯೋಜಿಸುವಂತೆ ಶಿಕ್ಷಣಾಭಿಮಾನಿಗಳನ್ನು ವಿನಂತಿಸಿತ್ತು. ಪ್ರಸ್ತುತ 11 ಮಂದಿ (ಕ್ರಮವಾಗಿ ₹ 1 ಲಕ್ಷದಂತೆ ಮೂವರು ಹಾಗೂ ₹ 2 ಲಕ್ಷದಂತೆ 9 ಮಂದಿ) ಪ್ರಾಯೋಜಿಸಿದ್ದಾರೆ. ಅದರಿಂದ ಬರುವ ಬಡ್ಡಿಯಿಂದ ಚಿನ್ನದ ಪದಕದ   ಪ್ರಮಾಣಪತ್ರ ಹಾಗೂ ನಗದು ಬಹುಮಾನ ಕೊಡಲಾಗುತ್ತಿದೆ. ಬಡ್ಡಿಯಲ್ಲಿ ಬಂಗಾರ ಖರೀದಿಸಿ ನೀಡುವುದು ಅಷ್ಟು ಔಚಿತ್ಯಪೂರ್ಣ ಎನಿಸುವುದಿಲ್ಲ ಎಂಬ ಅಂಶವನ್ನು ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಗಮನಕ್ಕೆ ತಂದು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ ಪ್ರಾಯೋಜಕರಿಂದ ಹೆಚ್ಚಿನ ಠೇವಣಿ ಮೊತ್ತ ಸಂಗ್ರಹಿಸಿ ಚಿನ್ನದ ಪದಕ ನೀಡಲಾಗುವುದು’ ಎಂದು ಆರ್‌ಸಿಯು ಕುಲಸಚಿವರು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು