ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಳೆಗಾರರಿಗೆ ಶೇ 99ರಷ್ಟು ಬಿಲ್ ಪಾವತಿ: ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್

Last Updated 27 ಆಗಸ್ಟ್ 2020, 15:26 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಶೇ 99ರಷ್ಟು ಬಿಲ್ ಪಾವತಿಸಲಾಗಿದೆ’ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಇಲ್ಲಿನ ಎಸ್. ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕೋಟಿ ಟನ್ ಸಕ್ಕರೆ ಸಂಗ್ರಹವಿದೆ. ಕೇಂದ್ರ ಸರ್ಕಾರವು ಸಕ್ಕರೆ ರಪ್ತು ಮಾಡಲು ಅನುಮತಿ ನೀಡಿಲ್ಲ’ ಎಂದು ಹೇಳಿದರು.

ಸಲಹೆ ಪಡೆಯಬೇಕು:‘ರೈತರು ಹೊಸ ಹೊಸ ತಳಿಗಳನ್ನು ಉತ್ಪಾದಿಸಬೇಕು. ಕಡಿಮೆ ವೆಚ್ಚದಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆಯುವುದನ್ನು ಕಲಿಯಬೇಕು. ಸಕ್ಕರೆ ಉತ್ಪಾದನೆ ಹೆಚ್ಚಿಸಬೇಕು ಎನ್ನುವುದು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉದ್ದೇಶವಾಗಿದೆ. ಇಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ತಜ್ಞರಿಂದ ಸಲಹೆ ಪಡೆದು ಬೇಸಾಯ ಮಾಡಬೇಕು’ ಎಂದರು.

‘ಸಂಸ್ಥೆಯಲ್ಲಿ ಈ ಭಾಗದ ಹವಾಮಾನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಕಬ್ಬಿನ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಸಕ್ಕರೆ ಉತ್ಪಾದನೆಯಲ್ಲಿ ಸಿಂಹಪಾಲನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಆದ್ದರಿಂದ ಹೆಚ್ಚಿನ ಸಂಶೋಧನೆಗಾಗಿ ಜಾಡಶಾಪುರದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ’ ಎಂದು ತಿಳಿಸಿದರು.

ಕಬ್ಬು ಬೆಳೆಗಾರರಿಗೆ ತೊಂದರೆ ಆಗಿಲ್ಲ:‘ಕೋವಿಡ್-19 ಬಿಕ್ಕಟ್ಟಿನಿಂದಾಗಿ ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಇನ್ನುಳಿದ ಬೆಳೆಗಾರರು ಶಕ್ತಿಯನ್ನೇ ಕಳೆದುಕೊಂಡಿದ್ದಾರೆ’ ಎಂದರು.

ಸಕ್ಕರೆ ಇಲಾಖೆ ಆಯುಕ್ತರು ಅಕ್ರಂ ಪಾಷಾ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಆರ್.ಬಿ. ಖಾಂಡಗಾವೆ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಆರ್‌ಸಿಯು ಕುಲಪತಿ ಡಾ.ಎಂ. ರಾಮಚಂದ್ರಗೌಡ ಇದ್ದರು.

‘ನಕಲಿ ಕಾರ್ಮಿಕರು ಉದ್ಭವಿಸಿದ್ದಾರೆ’

‘ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರಿಗೆ ₹ 5ಸಾವಿರ ಘೋಷಣೆ ಮಾಡಿದಾಗ ಹಾವೇರಿ ಜಿಲ್ಲೆ ಒಂದರಲ್ಲೇ 30ಸಾವಿರ ಮಂದಿ ಕಾರ್ಮಿಕರ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದ ಅನೇಕ ಕಡೆಗಳಲ್ಲಿ ನಕಲಿ ಕಾರ್ಮಿಕರು ಉದ್ಭವಿಸಿದ್ದಾರೆ. ಇಂಥದ್ದನ್ನೆಲ್ಲವನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕ್ರಮ ವಹಿಸಲಾಗಿದೆ’ ಎಂದು ಹೆಬ್ಬಾರ್‌ ಹೇಳಿದರು.

‘ಕಾರ್ಡ್‌ ನವೀಕರಿಸದಿದ್ದರೂ ಪರಿಹಾರ ಕೊಡುತ್ತೇವೆ. ಆದರೆ, ಪರಿಹಾರ ಘೋಷಣೆ ಮಾಡಿದ ನಂತರದಲ್ಲಿ ಕಾರ್ಮಿಕ ಕಾರ್ಡ್‌ ಮಾಡಿಸಿದವರಿಗೆ ಪರಿಹಾರ ಸಿಗುವುದಿಲ್ಲ. ನಿಜವಾದ ಕಾರ್ಮಿಕರಿಗೆ ಮಾತ್ರವೇ ಸೌಲಭ್ಯ ದೊರೆಯಬೇಕು ಎನ್ನುವುದು ಇಲಾಖೆಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಕಾರ್ಮಿಕರ ಗುರುತಿನ ಚೀಟಿ ನೀಡುವಾಗ ಸಾಕಷ್ಟು ಪರಿಶೀಲನೆ ನಡೆಸಲಾಗುವುದು. ಕಾರ್ಡ್‌ಗಳ ದುರುಪಯೋಗ ಆಗುವುದರಿಂದ ಅರ್ಹ ಕಾರ್ಮಿಕರಿಗೆ ಮೋಸ ಮಾಡಿದಂತೆ ಆಗುತ್ತದೆ. ಇದರಿಂದ ನಿಜವಾದ ಕಾರ್ಮಿಕರ ಹಿತಾಸಕ್ತಿ ರಕ್ಷಣೆ ಮಾಡಲಾಗುವುದಿಲ್ಲ. ‘ನಕಲಿ ಕಾರ್ಮಿಕರ ಕಾರ್ಡ್‌ ಮಾಡುವ ಜಾಲ’ ತಡೆಯಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT