ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 18 ಶಿಕ್ಷಕರಿಗೆ ಸಂಭಾವನೆಯೇ ಇಲ್ಲ

Published 11 ಅಕ್ಟೋಬರ್ 2023, 4:32 IST
Last Updated 11 ಅಕ್ಟೋಬರ್ 2023, 4:32 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಳೆದ ಮೇ ತಿಂಗಳಿನಲ್ಲಿ ಜರುಗಿದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಿತ್ತೂರು ವಿಧಾನಸಭೆ ಮತಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕ ಸಿಬ್ಬಂದಿಗೆ ಐದು ತಿಂಗಳು ಕಳೆದರೂ ತಾಲ್ಲೂಕು ಆಡಳಿತ ಗೌರವ ಸಂಭಾವನೆ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಹಂತ, ಹಂತವಾಗಿ ದುಡ್ಡು ಬರುತ್ತದೆ. ಹೀಗಾಗಿ ಅವರಿಗೆ ಸಂಭಾವನೆ ನೀಡುವುದು ವಿಳಂಬವಾಗಿದೆ ಎಂದು ತಹಶೀಲ್ದಾರ್ ಕಚೇರಿ ಮೂಲ ತಿಳಿಸಿದೆ.

ತಾಲ್ಲೂಕಿನ ವಿವಿಧ ಶಾಲೆ, ಪ್ರೌಢಶಾಲೆಯ ಸುಮಾರು 18 ಶಿಕ್ಷಕರನ್ನು ಚುನಾವಣೆ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಚುನಾವಣೆ ಕಾರ್ಯ ಮುಗಿದ ಕೂಡಲೇ ಅವರ ಸಂಭಾವನೆ ಅವರ ಕೈ ಸೇರುವುದು ಇಲ್ಲಿಯವರೆಗಿನ ಸಂಪ್ರದಾಯ. ಆದರೆ, ಇನ್ನೂ ವರೆಗೆ ಕೆಲಸ ಮಾಡಿದ ಶಿಕ್ಷಕರ ಕೈಗೆ ಸಂಭಾವನೆ ಬಂದಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಮಾಸ್ಟರ್ ತರಬೇತುದಾರರು ಎಂದು ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಮಾಸ್ಟರಿಂಗ್, ಡಿ. ಮಾಸ್ಟರಿಂಗ್ ಕೆಲಸ ತೆಗೆದುಕೊಂಡರು. ವಿವಿಧ ಸ್ತರಗಳಲ್ಲಿ ಕೆಲಸ ಮಾಡಿರುವ ಸುಮಾರು 18 ಶಿಕ್ಷಕರಿಗೆ ಐದು ತಿಂಗಳಾದರೂ ಸಂಭಾವನೆ ದೊರೆತಿಲ್ಲ ಎಂದು ಹೆಸರು ಹೇಳಲಿಚ್ಛಸದ ಶಿಕ್ಷಕರು ಮಾಹಿತಿ ನೀಡಿದರು.

ಊಟವೇ ಸಂಭಾವನೆ!

ಕಿತ್ತೂರು ಮತಕ್ಷೇತ್ರದ ಚುನಾವಣೆಯಲ್ಲಿ ವಿವಿಧ ಹಂತಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ ಖುಷಿಗಾಗಿ ಚುನಾವಣಾಧಿಕಾರಿ ಅವರು ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಿದ್ದರು. ಎಲ್ಲರನ್ನೂ ಬಾಯ್ತುಂಬಿ ಹೊಗಳಿದರು. ಆದರೆ ಸಂಭಾವನೆ ಮಾತ್ರ ಇನ್ನೂ ವರೆಗೆ ಪಾವತಿಯಾಗಿಲ್ಲ. ಹೊಗಳಿಸಿಕೊಂಡು ಮಾಡಿದ ಊಟವೇ ಸಂಭಾವನೆ ಎಂದು ತಿಳಿದುಕೊಳ್ಳುವಂತಾಗಿದೆ ಎಂದು ಕೆಲವರು ವಿಷಾದಿಸಿದರು.

‘ಚುನಾವಣೆ ಕೆಲಸಕ್ಕೆ ಬೈಲಹೊಂಗಲ ಡಿಪೊದಿಂದ ಕೆಲವು ಬಸ್ ಗಳನ್ನು ತೆಗೆದುಕೊಳ್ಳಲಾಗಿತ್ತು. ಅವರಿಗೂ ವಿಳಂಬವಾಗಿ ದುಡ್ಡು ಪಾವತಿ ಮಾಡಲಾಯಿತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT