ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಫೇಸ್‌ಬುಕ್‌ ಬಳಕೆ, ₹1.80 ಲಕ್ಷ ಸಂಗ್ರಹ

Last Updated 1 ಏಪ್ರಿಲ್ 2022, 14:09 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂದಿಯ ಅಂಬೇಡ್ಕರ್ ನಗರದ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ, ಕವಿ ವೀರಣ್ಣ ಮಡಿವಾಳರ ಅವರು ತಮ್ಮ ವಿದ್ಯಾರ್ಥಿನಿಯ ಚಿಕಿತ್ಸೆಗೆ ಅಗತ್ಯವಿದ್ದ ಹಣ ಹೊಂದಿಸಲು ಸಾಮಾಜಿಕ ಮಾಧ್ಯಮ ಬಳಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

‘ಫೇಸ್‌ಬುಕ್‌’ನ ಖಾತೆಯಲ್ಲಿ ಅವರು ಬಾಲಕಿಯ ಸ್ಥಿತಿ ಹಾಗೂ ಆಕೆಯ ಪೋಷಕರ ಅಸಹಾಯಕತೆ ಬಗ್ಗೆ ಬರೆದಿದ್ದರು. ಸ್ಪಂದಿಸಿದ ಸಹೃದಯಿಗಳು ಕೈಲಾದಷ್ಟು ಹಣ ನೀಡಿದ್ದಾರೆ. ಹೀಗೆ, ಸಂಗ್ರಹವಾದ ₹ 1.80 ಲಕ್ಷವನ್ನು ವೀರಣ್ಣ ಪೋಷಕರಿಗೆ ನೀಡಿದ್ದಾರೆ. ಈ ಮೂಲಕ ತಂತ್ರಜ್ಞಾನ–ಸಾಮಾಜಿಕ ಮಾಧ್ಯಮವನ್ನು ಸದುದ್ದೇಶಕ್ಕೂ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿದ್ದಾರೆ. ಇದರೊಂದಿಗೆ, ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.

ಸ್ನೇಹಿತರು, ಪರಿಚಯದವರು, ಪತ್ರಕರ್ತರು, ವಕೀಲರು ಮೊದಲಾದವರು ವೀರಣ್ಣ ಅವರಿಗೆ ಫೋನ್‌ಪೇ ಹಾಗೂ ಗೂಗಲ್‌ಪೇ ಮೂಲಕ ಹಣ ಹಾಕಿದ್ದರು.

ಪೆಡಲ್‌ ಮೇಲೆ ಬಿದ್ದಿದ್ದರಿಂದ:ಅವರ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ 9 ವರ್ಷದ ಲಕ್ಷ್ಮಿ ಹನಮಂತ ಹಿರೇಕೋಡಿ ವಿಚಿತ್ರ ಅವಘಡದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದಳು. ಗೋಡೆಗೆ ಒರಗಿಸಿ ನಿಲ್ಲಸಿದ್ದ ಬೈಸಿಕಲ್‌ ಹತ್ತಿ ಆಡುತ್ತಿದ್ದ ಆಕೆ ಅಕಸ್ಮಾತ್‌ ಕೆಳಗೆ ಬಿದ್ದಿದ್ದಾಳೆ. ರಭಸದಿಂದ ಬಿದ್ದ ವೇಳೆ, ಪೆಡಲ್‌ನ (ಒಡೆದಿದ್ದ) ಸರಳು ಬಾಲಕಿಯ ಗುದದ್ವಾರದ ಮೂಲಕ ದೇಹದೊಳಗೆ ಚುಚ್ಚಿತ್ತು. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2ನೇ ದಿನಕ್ಕೆ ದೇಹಕ್ಕೆ ನಂಜೇರಿತ್ತು. ಹೊಟ್ಟೆಉಬ್ಬಿಕೊಂಡು ಕೈ–ಕಾಲುಗಳು ಬಾತುಕೊಂಡಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿನ ಮಕ್ಕಳ ವೈದ್ಯರು, ದೇಹದಲ್ಲಿ ಸಂಗ್ರಹವಾಗಿದ್ದ ಮಲವನ್ನು ತೆಗೆದು ಚಿಕಿತ್ಸೆ ನೀಡಿದ್ದರು. ವಿಸರ್ಜನೆಗಾಗಿ ದೊಡ್ಡ ಕರುಳನ್ನು ದೇಹದ ಹೊರಗೆ ಪೈಪ್‌ಗೆ ಜೋಡಿಸಿದ್ದರು. ಗಾಯ ಮಾಯುವವರೆಗೂ ಇದೇ ಸ್ಥಿತಿ ಇತ್ತು. ವಿಷಯ ತಿಳಿದು ಸಾಂಗ್ಲಿಗೆ ತೆರಳಿ ಬಾಲಕಿ ಹಾಗೂ ಪೋಷಕರನ್ನು ಭೇಟಿಯಾಗಿದ್ದ ಮಡಿವಾಳರ, ‘ಲಕ್ಷ್ಮಿ ತಾಯಿಯ ಹೆತ್ತೊಡಲ ಸಂಕಟದ ಬೆಂಕಿಯನ್ನು ನಮ್ಮ ಒಂದೊಂದು ಹನಿ ಸಹಾಯ ನಂದಿಸಲಿ’ ಎಂದು ಪೋಸ್ಟ್‌ನಲ್ಲಿ ಕೋರಿದ್ದರು. ಇದಕ್ಕೆ ಹಲವರು ಸ್ಪಂದಿಸಿದ್ದಾರೆ.

ವೀರಣ್ಣ ಹಾಗೂ ಸಹಾಯ ಮಾಡಿದವರೆಲ್ಲರಿಗೂ ಲಕ್ಷ್ಮಿ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಒಂದು ಹಂತದ ಚಿಕಿತ್ಸೆ ಮುಗಿದಿದೆ:‘ಲಕ್ಷ್ಮಿಗೆ ಒಂದು ಹಂತದ ಚಿಕಿತ್ಸೆ ಮುಗಿದಿದ್ದು, ಆಕೆಯನ್ನು ಮನೆಗೆ ಕರೆತರಲಾಗಿದೆ. ಮನೆಯಲ್ಲೇ ಆರೈಕೆ ಮುಂದುವರಿಯಲಿದೆ. ಆಗಾಗ ಆಸ್ಪತ್ರೆಗೆ ಹೋಗಬೇಕು. ಅವಳಿಗಾದ ಗಾಯ ಸಂಪೂರ್ಣ ವಾಸಿಯಾದ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಬಳಿಕ ಆಕೆ ಸಹಜವಾಗಿ ಲವಲವಿಕೆಯಿಂದ ಇರಲಿದ್ದಾಳೆ. ಆ ಬಡ ಕುಟುಂಬದ ಸಂಕಷ್ಟದ ವೇಳೆ ಬಹಳಷ್ಟು ಮಂದಿ ಆರ್ಥಿಕವಾಗಿ ನೆರವಾದರು. ಹಣವನ್ನು ಆಕೆಯ ತಾಯಿಯ ಖಾತೆಗೆ ಹಾಕಿದ್ದೇನೆ’ ಎಂದು ವೀರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT