ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಮಾಚಾರದ ವಸ್ತುಗಳು ಪತ್ತೆ

Published 11 ಜುಲೈ 2024, 7:03 IST
Last Updated 11 ಜುಲೈ 2024, 7:03 IST
ಅಕ್ಷರ ಗಾತ್ರ

ಶಿರಸಂಗಿ: ‘ಸವದತ್ತಿ ತಾಲ್ಲೂಕಿನ ಪುರಾಣ ಪ್ರಸಿದ್ಧ ಕಾಳಿಕಾದೇವಿ ದೇವಸ್ಥಾನದ ಆಸ್ತಿ ಕಬಳಿಸುವ ಹುನ್ನಾರದಿಂದ ವಾಮಾಚಾರ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಮಾಟ– ಮಂತ್ರದ ವಸ್ತುಗಳು ಪತ್ತೆಯಾಗಿವೆ. ಜನರೇ ಇದನ್ನು ಪತ್ತೆ ಮಾಡಿದ್ದು, ದೇವಸ್ಥಾನದ ಕಚೇರಿ ಮುಂದೆ ತಂದಿಟ್ಟಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘12 ಎಕರೆ 13 ಗುಂಟೆ ಜಮೀನು ದೇವಸ್ಥಾನದ ಪಕ್ಕದಲ್ಲಿದೆ. ಇದು ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿ. ಕೆಲವರು ಗುಂಪು ಕಟ್ಟಿಕೊಂಡು ಸಂಸ್ಥೆಯೊಂದನ್ನು ಹುಟ್ಟುಹಾಕಿ, ಅದರ ಮೂಲಕ ಈ ಜಮೀನು ಪಡೆಯಲು ಯತ್ನಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಜಮೀನನ್ನು ತಮ್ಮ ಸಂಸ್ಥೆ ಹೆಸರಿಗೆ ಮಾಡಿಕೊಂಡಿದ್ದಾರೆ. ಭಕ್ತರ ದೇಣಿಗೆಯನ್ನೂ ಸಂಗ್ರಹಿಸುತ್ತಿದ್ದಾರೆ. ಇದೆಲ್ಲವೂ ಭಕ್ತರಿಗೆ ಗೊತ್ತಾಗಿದ್ದರಿಂದ, ಹೆದರಿಸಿ ಆಸ್ತಿ ಕಬಳಿಸಲು ವಾಮಾಚಾರದಂಥ ಮೌಢ್ಯದ ದಾರಿ ಹಿಡಿದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮಣ್ಣೆತ್ತಿನ ಅಮಾವಾಸ್ಯೆಯ ರಾತ್ರಿಯಂದು ಗ್ರಾಮದ ಕೆಲವು ಪ್ರಮುಖರ ಹೆಸರುಗಳನ್ನು ಚೀಟಿಯಲ್ಲಿ ಬರೆದು, ಒಂದು ಕುಡಿಕೆ, ಸೂಜಿ–ದಾರ, ಲಿಂಬೆಹಣ್ಣು, ಕರಿ ಗೊಂಬೆ ಮುಂತಾದ ವಸ್ತುಗಳನ್ನು ಇಟ್ಟು, ಕರಿ ಬಟ್ಟೆಯಲ್ಲಿ ಕಟ್ಟಿ ಜಮೀನಿನಲ್ಲಿ ನಾಲ್ಕು ದಿಕ್ಕುಗಳಲ್ಲಿ ಹೂಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ವಿಷಯ ಗೊತ್ತಾಗಿ ಗ್ರಾಮಸ್ಥರೇ ಸೇರಿಕೊಂಡು ವಾಮಾಚಾರದ ವಸ್ತುಗಳನ್ನು ತೆಗೆದು, ಕಚೇರಿಯ ಮುಂದೆ ತಂದು ಇಟ್ಟಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT