ಗುರುವಾರ , ಡಿಸೆಂಬರ್ 3, 2020
22 °C

ಸತತ 2ನೇ ಬಾರಿಗೆ ಅಧಿವೇಶನ ವಂಚಿತ ಬೆಳಗಾವಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಈ ಬಾರಿಯ ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲು ಸರ್ಕಾರವು ನಿರ್ಧರಿಸಿರುವುದು, ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಹೋದ ವರ್ಷ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು. ಸಾವಿರಾರು ಮಂದಿ ಸಂತ್ರಸ್ತರಾಗಿದ್ದರು. ಹೀಗಾಗಿ, ನೆರೆ ಪರಿಹಾರ ಕಾರ್ಯಗಳಲ್ಲಿ ಅಧಿಕಾರಿಗಳು ತೊಡಗಬೇಕು, ಅವರಿಗೆ ಸಮಯ ಬೇಕು. ಆದ್ದರಿಂದ ಅಧಿವೇಶನವನ್ನು ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಇದನ್ನೂ ಓದಿ... ಡಿ.7ರಿಂದ ವಿಧಾನಸಭೆ ಅಧಿವೇಶನ

ಈ ಬಾರಿ ಕೋವಿಡ್-19 ನೆಪವೊಡ್ಡಿ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿರುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸದಿರುವುದು ಹಾಗೂ ಈಗ ಅಧಿವೇಶನ ನಡೆಸುವುದನ್ನೂ ತಪ್ಪಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಸುವರ್ಣ ವಿಧಾನಸೌಧ ನಿರ್ಮಾಣವಾದ ನಂತರ ವರ್ಷದಲ್ಲಿ ಹತ್ತು ದಿನಗಳು ವಿಧಾನಮಂಡಲ ಅಧಿವೇಶನ ನಡೆಸಲಾಗುತ್ತಿತ್ತು. 2018ರಲ್ಲಿ ಅಧಿವೇಶನ ನಡೆದಿತ್ತು. ಅದಾದ ನಂತರ ನಡೆಸಿಲ್ಲ. ಇದರ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆಯಾಗುತ್ತಿದೆ. ಸರ್ಕಾರವು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿರುವುದನ್ನು ಕಟುವಾದ ಮಾತುಗಳಲ್ಲಿ ಟೀಕಿಸುತ್ತಿದ್ದಾರೆ. ಸುವರ್ಣ ವಿಧಾನಸೌಧಕ್ಕೆ ಪ್ರಸ್ತುತ ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು