ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್: ಮಹತ್ವದ ಕೊಡುಗೆಗಳಿಲ್ಲ, ನಿರೀಕ್ಷೆ ಹುಸಿ

ರಾಜ್ಯ ಬಜೆಟ್‌ನಲ್ಲಿ ಹಳೆಯದಕ್ಕೆ ಅನುದಾನ
Last Updated 8 ಮಾರ್ಚ್ 2021, 15:10 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಮಹತ್ವದ ಕೊಡುಗೆಗಳೇನು ಸಿಕ್ಕಿಲ್ಲ.

ಕೆಲವು ಹಳೆಯ ಯೋಜನೆಗಳನ್ನು ಪುನರ್‌ ಪ್ರಸ್ತಾಪಿಸಿರುವುದು ಮತ್ತು ಈಗಿರುವ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಹೇಳಿರುವುದನ್ನು ಹೊರತುಪಡಿಸಿದರೆ ಜನರ ನಿರೀಕ್ಷೆಗೆ ದೊಡ್ಡ ಮಟ್ಟದ ಸ್ಪಂದನೆಯೇನೂ ಸಿಕ್ಕಿಲ್ಲ. ಪ್ರಭಾವಿಗಳೆ ಸರ್ಕಾರದ ಭಾಗವಾಗಿದ್ದರೂ, ‘ಸಿಹಿ ಸುದ್ದಿ’ ಸಿಕ್ಕಿಲ್ಲದಿರುವುದು ಜನರ ನಿರಾಶೆಗೆ ಕಾರಣವಾಗಿದೆ. ನೀರಾವರಿ, ಕೃಷಿ ಯೋಜನೆಗಳು ಸೇರಿದಂತೆ ಜಿಲ್ಲೆಯ ಬಹುತೇಕ ಬೇಡಿಕೆಗಳಿಗೆ ಮಣೆ ಹಾಕಿಲ್ಲ.

ಈ ಭಾಗದ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ₹ 1,677 ಕೋಟಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹೋದ ವರ್ಷದ ಬಜೆಟ್‌ನಲ್ಲೂ ಇದನ್ನು ಘೋಷಿಸಲಾಗಿತ್ತು. ಆಗ ₹ 500 ಕೋಟಿ ಮೀಸಲಿಡಲಾಗಿತ್ತು. ಆ ಹಣ ಬಳಕೆಯೇ ಆಗಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿಯೇ ದೊರೆತಿಲ್ಲ! ಈ ಬಾರಿ ಹೆಚ್ಚಿನ ಪ್ರಮಾಣದ ಅನುದಾನ ಘೋಷಿಸಲಾಗಿದೆ ಬಿಟ್ಟರೆ, ಇದರಲ್ಲಿ ಹೊಸತೇನೂ ಇಲ್ಲ.

ಸ್ಪಷ್ಟತೆ ಇಲ್ಲ:

ಗಡಿ ನಾಡು ನಿಪ್ಪಾಣಿಯಲ್ಲಿ ‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಇದಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ, ಅದರ ಸ್ವರೂಪವೇನು, ಯಾರ‍್ಯಾರಿಗೆ ಅನುಕೂಲಾಗುತ್ತದೆ ಎಂಬಿತ್ಯಾದಿ ಸ್ಪ‌ಷ್ಟತೆ ಇಲ್ಲ.

ಬೆಳಗಾವಿ ನಗರದಲ್ಲಿ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ವೆಚ್ಚದ ಶೇ 50ರಷ್ಟು ಮೊತ್ತ ₹140 ಕೋಟಿ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಲಾಗಿದೆ. ಇದರಿಂದ ನಗರದ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದನೆ ದೊರೆತಂತಾಗಿದೆ. ಹಲಗಾ–ಮಚ್ಚೆ ಬೈಪಾಸ್‌ ನಿರ್ಮಾಣ ಕಾಮಗಾರಿಗೇ ರೈತರು ತಮ್ಮ ಜಮೀನು ನೀಡಲು ವಿರೋಧ ವ್ಯಕ್ತ‍ಪಡಿಸುತ್ತಿದ್ದಾರೆ. ಕಾಮಗಾರಿಗೆ ಅಡ್ಡಪಡಿಸುತ್ತಿದ್ದಾರೆ. ಹೀಗಿರುವಾಗ, ರಿಂಗ್ ರಸ್ತೆಗಾಗಿ ದೊಡ್ಡ ಪ್ರಮಾಣದಲ್ಲಿ ಭೂಸ್ವಾಧೀನದ ಸವಾಲು ಎದುರಾಗಿದೆ.

ಅರೆಕಾಸಿನ ಮಜ್ಜಿಗೆ:

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪರಿಶ್ರಮದ ಫಲವಾಗಿ ಘೋಷಣೆ ಆಗಿರುವ ಧಾರವಾಡ–ಕಿತ್ತೂರು–ಬೆಳಗಾವಿ ನಡುವೆ 73 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ₹ 463 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ಇದಕ್ಕೆ ಅತ್ಯಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ.

ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಕಿತ್ತೂರು ಕೋಟೆ ಅಭಿವೃದ್ಧಿಗಾಗಿ ₹ 200 ಕೋಟಿ ಬೇಡಿಕೆ ಇತ್ತು. ಆದರೆ, ಕೋಟೆ ಆವರಣದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ ನೀಡಲಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣಕಾಸಿನ ವಾಗ್ದಾನ ಸಿಕ್ಕಿಲ್ಲ. ರಾಣಿ ಚನ್ಮಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಸಮೀಪ ಹೊಸದಾಗಿ ಜಾಗ ನೀಡಲಾಗಿದೆ. ಆದರೆ, ಅಲ್ಲಿ ಕ್ಯಾಂಪಸ್ ಅಭಿವೃದ್ಧಿಪಡಿಸಲು ಅನುದಾನ ದೊರೆತಿಲ್ಲ.

ಕನಸಾಗಿಯೇ ಉಳಿದ ವಿಭಜನೆ

ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಚಿಕ್ಕೋಡಿ ಮತ್ತು ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂಬ ಆ ಭಾಗದ ಜನರ ಆಗ್ರಹಕ್ಕೆ, ಯರಗಟ್ಟಿ ತಾಲ್ಲೂಕು ಘೋಷಣೆಗೆ, ಕರ್ನಾಟಕದ ನಯಾಗರ ಎಂಬ ಖ್ಯಾತಿಯ ಗೋಕಾಕ ಜಲಪಾತದ ಅಭಿವೃದ್ಧಿಗೆ, ಸವದತ್ತಿ ಯಲ್ಲಮ್ಮನ ಗುಡ್ಡ ಸೇರಿದಂತೆ ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಸಾಂಬ್ರಾ ವಿಮಾನನಿಲ್ದಾಣ ರಸ್ತೆ ವಿಸ್ತರಣೆಗೆ ಮನ್ನಣೆ ನೀಡಿಲ್ಲ. ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯವಿದ್ದರೂ, ಅದು ಬಜೆಟ್‌ನಲ್ಲಿ ಪ್ರತಿಫಲಿಸದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನೆಪದಲ್ಲಾದರೂ ಒಂದಷ್ಟು ಕೊಡಗೆಗಳು ಸಿಗಬಹುದು ಎಂಬ ಬೆಳಗಾವಿಗರ ನಿರೀಕ್ಷೆ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT