ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ‘ನೆಲೆ’ ಕಾಣದ ಗ್ರಂಥಾಲಯ

ಕಿರಿದಾದ ಜಾಗ; ಮೇಲ್ಮಹಡಿ ಏರುವ ಅನಿವಾರ್ಯ
Last Updated 13 ಜೂನ್ 2019, 14:22 IST
ಅಕ್ಷರ ಗಾತ್ರ

ಅಥಣಿ: ಇಲ್ಲಿನಸಾರ್ವಜನಿಕ ಗ್ರಂಥಾಲಯ ಹಲವು ವರ್ಷಗಳಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. ಸ್ವಂತ ಜಾಗವಿದ್ದರೂ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಂಥಾಲಯದಲ್ಲಿ ಅಧ್ಯಯನಕ್ಕೆ ಪೂರಕ ವಾತಾವರಣವಿಲ್ಲದೇ ಓದುಗರು ತೊಂದರೆ ಅನುಭವಿಸುತ್ತಿದ್ದಾರೆ. ವಾಣಿಜ್ಯ ಕಟ್ಟಡ ಬಾಡಿಗೆ ಪಡೆದು ಗ್ರಂಥಾಲಯ ನಡೆಸಲಾಗುತ್ತಿದೆ. ಅದೂ ಮೇಲ್ಮಹಡಿಯಲ್ಲಿ ಗ್ರಂಥಾಲಯವಿದೆ.

1981ರಲ್ಲಿ ಇಲ್ಲಿನ ಬುಧವಾರ ಪೇಟೆಯ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಮುರುಘೇಂದ್ರ ಸ್ವಾಮಿ ಬ್ಯಾಂಕ್ ಹತ್ತಿರದಲ್ಲಿ ಈ ಜ್ಞಾನದೇಗುಲವಿದೆ. ಪ್ರಮುಖ ವ್ಯಾಪಾರ–ವಹಿವಾಟು ನಡೆಯುವ ಸ್ಥಳ ಇದ್ದಾಗಿರುವುದರಿಂದ, ಹೆಚ್ಚು ಜನದಟ್ಟಣೆ, ವಾಹನಗಳ ಶಬ್ದದ ಕಿರಿಕಿರಿ ದಿನವಿಡೀ ಇರುತ್ತದೆ. ಹೀಗಾಗಿ, ಶಾಂತವಾಗಿ ಓದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ವಯಸ್ಸಾದವರು, ಅಶಕ್ತರು ಮೇಲ್ಮಹಡಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಹಲವರು ಗ್ರಂಥಾಲಯ ಸೌಲಭ್ಯ ಬಳಸಿಕೊಳ್ಳುವುದರಿಂದ ವಂಚಿತರಾಗಿದ್ದಾರೆ.

ಗ್ರಂಥಾಲಯದಲ್ಲಿ 30ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಉರ್ದು ಭಾಷೆಯ ಕಥೆ, ಕಾದಂಬರಿ, ನಾಟಕ, ಸಾಹಿತ್ಯದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮ್ಯಾಗಜಿನ್‌ಗಳು, ವಾರಪತ್ರಿಕೆ, ನಿಯತಕಾಲಿಕ, ಮಾಸಪತ್ರಿಕೆ, ದಿನಪತ್ರಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ಇವೆ. ಸಾಕಷ್ಟು ಪುಸ್ತಕಗಳಿದ್ದರೂ ಅವುಗಳನ್ನು ರ್‍ಯಾಕ್‌ಗಳಲ್ಲಿ ಇಟ್ಟಿಲ್ಲ. ಸ್ಥಳದ ಅಭಾವದಿಂದಾಗಿ ಅವುಗಳನ್ನು ಮೂಟೆಗಳಲ್ಲಿ ಕಟ್ಟಿಡಲಾಗಿದ್ದು, ದೂಳು ತಿನ್ನುತ್ತಿವೆ. ಹೀಗಾಗಿ, ಅವುಗಳು ಓದುಗರಿಗೆ ದೊರೆಯುತ್ತಿಲ್ಲ. ಅಲ್ಲಿ ಲಭ್ಯವಿರುವ ಪುಸ್ತಕಗಳು ಯಾವುವು ಎನ್ನುವುದು ಕೂಡ ಓದುಗರಿಗೆ ತಿಳಿಯುವುದೇ ಇಲ್ಲ. ಹೀಗಾಗಿ, ಪುಸ್ತಕಗಳಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ಪಟ್ಟಣದಲ್ಲಿ ಸಾಕಷ್ಟು ಶಾಲಾ–ಕಾಲೇಜುಗಳಿವೆ. ಇಲ್ಲಿನವರೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಇಲ್ಲಿ ವಾಸವಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಗ್ರಂಥಾಲಯವನ್ನು ಹೆಚ್ಚು ಬಳಸುತ್ತಾರೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸದಸ್ಯತ್ವ ಪಡೆದುಕೊಂಡಿದ್ದು, ನಿತ್ಯವೂ ಓದಲು ಬರುತ್ತಾರೆ. ಏಕಕಾಲಕ್ಕೆ ಇಲ್ಲಿ 10 ಮಂದಿಗಷ್ಟೇ ಕುಳಿತುಕೊಳ್ಳಲು ಅವಕಾಶವಿದೆ! ಮೊದಲು ಬಂದವರು ಕೂರಬಹುದು. ಬಳಿಕ ಬಂದವರು ನಿಂತೇ ಓದುವ ಅನಿವಾರ್ಯತೆ ಈಗಲೂ ಇದೆ. ಓದುಗರಿಗೆ ಆಗುತ್ತಿರುವ ಈ ತೊಂದರೆ ಹೋಗಲಾಡಿಸಲು ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

1995-96ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಲೀಲಾದೇವಿ ಆರ್. ಪ್ರಸಾದ್‌ ಗ್ರಂಥಾಲಯಕ್ಕಾಗಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಬಳಿ 5 ಗುಂಟೆ ಜಾಗ ಮಂಜೂರು ಮಾಡಿಸಿದ್ದರು. ಆದರೆ ವರ್ಷಗಳೇ ಉರುಳಿದರೂ ಇಲ್ಲಿವರೆಗೂ ಅಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT