ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಮಿಶ್ರ ಬೇಸಾಯದಲ್ಲಿ ಉತ್ತಮ ಆದಾಯ

ಗಮನಸೆಳೆದಿರುವ ಸತ್ತಿಯ ಬ್ಯಾಳಗೌಡರ ಸಹೋದರರು
Last Updated 10 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನ ದಕ್ಷಿಣ ಭಾಗದಲ್ಲಿರುವ ಸತ್ತಿ ಗ್ರಾಮದಲ್ಲಿ ಸವಳು-ಜವಳು ಭೂಮಿ ಹೆಚ್ಚು. ಇದರಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಕಷ್ಟ. ಈ ನಡುವೆಯೂ ಉತ್ತಮ ವ್ಯವಸಾಯ ಮತ್ತು ನಿರ್ವಹಣೆಯಿಂದ ಆದಾಯ ಕಾಣುತ್ತಿದ್ದಾರೆ ಅಲ್ಲಿನ ಬ್ಯಾಳಗೌಡರ ಸಹೋದರರು.

ಸತ್ತಿ ಗ್ರಾಮ ಹಲವು ವಿಶೇಷತೆಗಳ ಊರು. ಕೃಷ್ಣಾ ನದಿ ದಂಡೆಯಲ್ಲಿರುವ ಈ ಗ್ರಾಮಸ್ಥರ ಪ್ರಮುಖ ಉದ್ಯೋಗ ಕೃಷಿ ಹಾಗೂ ಹೈನುಗಾರಿಕೆ. ಪ್ರಮುಖ ಬೆಳೆಯೆಂದರೆ ಕಬ್ಬು. ಆದರೆ, ಕಬ್ಬಿನೊಂದಿಗೆ ಇನ್ನಿತರ ಬೆಳೆ ಬೆಳೆಯುವ ಮೂಲಕ ಬಸಗೌಡ ಬ್ಯಾಳಗೌಡರ ಮತ್ತು ಅಣ್ಣಪ್ಪ ಬ್ಯಾಳಗೌಡರ ಸಹೋದರರು ಗಮನಸೆಳೆದಿದ್ದಾರೆ. ಮಿಶ್ರ ಬೇಸಾಯ ಮಾಡಿ ಪ್ರಗತಿಪರ ಕೃಷಿಕರು ಎನಿಸಿಕೊಂಡಿದ್ದಾರೆ.

10ನೇ ತರಗತಿ ಓದಿರುವ ಈ ಸಹೋದರರು, ಗ್ರಾಮದ ಬಯಲು ಬಸವೇಶ್ವರ ಗುಡಿ ಹತ್ತಿರವಿರುವ 30 ಗುಂಟೆ ಜಮೀನಿನಲ್ಲಿ ಎಲೆಬಳ್ಳಿ (ವೀಳ್ಯದೆಲೆ), 30 ಗುಂಟೆ ಜಮೀನಿನಲ್ಲಿ ಜವಾರಿ ಬಾಳೆ ಗಿಡಗಳನ್ನು ಹಾಕಿದ್ದಾರೆ. ಐದು ವರ್ಷಗಳಿಂದ ಎಲೆ ಬಳ್ಳಿ ಬೆಳೆಯುತ್ತಿದ್ದಾರೆ. ದಿನಾಲು 12ಸಾವಿರ ಎಲೆಗಳನ್ನು ಅಥಣಿ, ಪಕ್ಕದ ಮಹಾರಾಷ್ಟ್ರದ ಮುಂಬೈ, ಸಾಂಗ್ಲಿ ಮೊದಲಾದ ಕಡೆಗಳಿಗೆ ಕಳುಹಿಸುತ್ತಾರೆ. ನೀರಿನ ಮಹತ್ವ ಅರಿತಿರುವ ಅವರು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಕೃಷಿಯಿಂದಾಗಿ ಸ್ವಾವಲಂಬಿಯಾಗಿದ್ದಾರೆ. ಕುಟುಂಬದ ಸದಸ್ಯರನ್ನು ಕೂಡ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಫಲವತ್ತತೆ ಕಾಪಾಡಿಕೊಂಡು

ತಿಪ್ಪೆ ಗೊಬ್ಬರ, ಶೇಂಗಾ ಹಿಂಡಿ, ಹಲಗಲಿ ಹಿಂಡಿ ಹಾಗೂ ತಂಬಾಕಿನ ‘ದುಸು’ ಹಾಕಿ ಭೂಮಿಯ ಫಲವತ್ತತೆ ಕಾಯ್ದುಕೊಂಡು ಬಂದಿದ್ದಾರೆ.

ಈ ಸಹೋದರರಿಗೆ 8 ಎಕರೆ ಜಮೀನಿದೆ. 30 ಗುಂಟೆಯಲ್ಲಿ ಎಲೆಬಳ್ಳಿ, 30 ಗುಂಟೆಯಲ್ಲಿ ಬಾಳೆ, 5 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಇನ್ನುಳಿದ ಜಮೀನಿನಲ್ಲಿ ದನಗಳಿಗೆ ಮೇವು ಬೆಳೆದಿದ್ದಾರೆ. ಜೊತೆಗೆ ಮೆಣಸಿನಗಿಡ ಬೆಳೆದು ಮಿಶ್ರ ಬೆಳೆಗಳ ಮೂಲಕ ನಿರಂತರವಾಗಿ ಆದಾಯ ಬರುವಂತಹ ವ್ಯವವ್ಥೆ ಮಾಡಿಕೊಂಡಿದ್ದಾರೆ.

ಎಲೆ ಬಳ್ಳಿ ಮಧ್ಯದಲ್ಲಿ ಬಳ್ಳಿಗೆ ನೆರವಾಗಲು ನುಗ್ಗೆ ಗಿಡಗಳನ್ನು ಬೆಳೆಸಿದ್ದಾರೆ. ವರ್ಷದಲ್ಲಿ 2 ತಿಂಗಳು ನುಗ್ಗಿಕಾಯಿಗಳನ್ನು ತಮ್ಮ ಸ್ವಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ಮಾರುತ್ತಾರೆ. ಸಮಾರಂಭಗಳಲ್ಲಿ ಅಡುಗೆ ತಯಾರಿಸುವುದಕ್ಕಾಗಿ, ಕೆಲವರು ಅವರ ತೋಟಕ್ಕೇ ಬಂದು ನುಗ್ಗೆ ಕಾಯಿ ಖರೀದಿಸಿಕೊಂಡು ಹೋಗುತ್ತಾರೆ. ವೀಳ್ಯದೆಲೆ ತೋಟದಲ್ಲಿ ಹೆಬ್ಬೇವು ಕೂಡ ಬೆಳೆಸಿದ್ದಾರೆ. ಇವುಗಳ ಮೂಲಕವೂ ಮುಂದಿನ ದಿನಗಳಲ್ಲಿ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ ಅವರು.

30 ಗುಂಟೆಯಲ್ಲಿ ಜವಾರಿ ತಳಿಯ 330 ಗಿಡಗಳನ್ನು ಹಚ್ಚಿದ್ದಾರೆ. ಫಲವತ್ತಾಗಿ ಬೆಳೆದು ನಿಂತಿವೆ. ‘ಗಿಡವೊಂದರಲ್ಲಿ ಸರಾಸರಿ 16 ಡಜನ್ ಹಣ್ಣುಗಳು ಸಿಗುತ್ತವೆ’ ಎನ್ನುತ್ತಾರೆ. ರೋಗ ಬಾರದಂತೆ ಮುಂಜಾಗ್ರತೆ ವಹಿಸಿದ್ದಾರೆ. ಸಾವಯವ ಗೊಬ್ಬರ ಬೆಳೆಸುತ್ತಾರೆ. ದಲ್ಲಾಳಿಗಳ ಮೊರೆ ಹೋಗದೆ ತಾವೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರುವ ಜಾಣ್ಮೆಯನ್ನೂ ಅವರು ತೋರುತ್ತಿದ್ದಾರೆ. ಬಾಳೆಹಣ್ಣುಗಳನ್ನು ಸಹ ಗ್ರಾಮ ಸೇರಿದಂತೆ ಸುತ್ತಲಿನ ಸಂತೆಗಳಲ್ಲಿ ಮಾರುತ್ತಾರೆ. ಇದಕ್ಕೂ ಕುಟುಂಬದವರು ಕೈಜೋಡಿಸುತ್ತಿದ್ದಾರೆ.

ಹೈನುಗಾರಿಕೆ

ತೋಟಗಾರಿಕೆ ನೆರವಾಗಲು 10 ದನ-ಕರುಗಳನ್ನು ಸಾಕಿದ್ದಾರೆ. ಸಗಣಿಯನ್ನು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದಾರೆ. ಹಾಲು ಉತ್ಪಾದನೆಯಿಂದ ಕಿರು ಆದಾಯ ಕಾಣುತ್ತಿದ್ದಾರೆ. ಕೃಷಿಯಿಂದ ದೂರವಾಗಿ ನಗರ ಪ್ರದೇಶದತ್ತ ಉದ್ಯೋಗಕ್ಕಾಗಿ ಅಲೆಯುತ್ತಿರುವ ಅನೇಕ ಯುವಕರಿಗೆ ಇವರ ಕೃಷಿ ಕಾಯಕ ಮಾದರಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಆಳಾಗಿ ದುಡಿದರೆ ಅರಸನಾಗಿ ಉಣ್ಣಬಹುದು ಎಂಬ ಮಾತಿನಂತೆ ನಾವು ಶ್ರಮ ಪಟ್ಟು ದುಡಿಯುತ್ತಿದ್ದೇವೆ. ಇದರಿಂದ ನಮ್ಮ ಆದಾಯಕ್ಕೆ ಸಹಾಯವಾಗಿದೆ. ಸಮಯ ವ್ಯರ್ಥ ಮಾಡದೆ, ನಂಬಿಕೆ ಇಟ್ಟು ದುಡಿದರೆ ಭೂಮಿ ತಾಯಿ ಪ್ರತಿಫಲ ಕೊಡುತ್ತಾಳೆ’ ಎನ್ನುತ್ತಾರೆ ಈ ಸಹೋದರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT